ರಾಯಚೂರು: ಖಾಸಗಿ ಶಾಲಾ ಬಸ್ ಹಾಗೂ ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ಮಾನವಿ ತಾಲೂಕಿನ ಕಪಗಲ್ ಗ್ರಾಮದ ಹಳ್ಳದ ಬಳಿ ಘಟನೆ ನಡೆಯಿತು.
ಮಾನವಿ ಪಟ್ಟಣದ ಲೋಯೋಲೋ ಶಾಲೆಯ ಬಸ್ ಮಾನವಿ ಕಡೆ ಹೊರಟಿತ್ತು. ಮಾನವಿ ಪಟ್ಟಣದಿಂದ ರಾಯಚೂರು ಕಡೆಗೆ ಸರ್ಕಾರಿ ಬಸ್ ಸಂಚರಿಸುತ್ತಿತ್ತು. ಕಪಗಲ್ ಗ್ರಾಮದ ಹಳ್ಳದ ಬಳಿ ಎರಡೂ ಬಸ್ಗಳು ಪರಸ್ಪರ ಡಿಕ್ಕಿ ಹೊಡೆದಿವೆ.
ಶಾಲಾ ಬಸ್‌ನಲ್ಲಿದ್ದ 40 ವಿದ್ಯಾರ್ಥಿಗಳಲ್ಲಿ ನಾಲ್ಕು ವಿದ್ಯಾರ್ಥಿಗಳ ಕಾಲು ತುಂಡಾಗಿದೆ. ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾನವಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಬೆಂಗಳೂರು: ಚಲಿಸುತ್ತಿದ್ದ ಆಟೋ ಮೇಲೆ ಮರದ ಕೊಂಬೆ ಬಿದ್ದು ಚಾಲಕ ಸಾವು - Tree Falls On Moving Auto
KSRTCಯಿಂದ ಪರಿಹಾರ ಘೋಷಣೆ: "ಸರ್ಕಾರಿ ಬಸ್ ಮತ್ತು ಶಾಲಾ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ದುರಂತ ಉಂಟಾಗಿದೆ. ಸಿಎಂ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾರೆ. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಮತ್ತು ಪರಿಹಾರ ನೀಡಲು ಸೂಚಿಸಿದ್ದಾರೆ. ಕೆಎಸ್ಆರ್ಟಿಸಿಯಿಂದ ಮೃತ ಇಬ್ಬರು ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 3 ಲಕ್ಷ ರೂ ಪರಿಹಾರವನ್ನು ಇಂದೇ ಕೊಡಲಾಗುತ್ತದೆ. ವಿದ್ಯಾರ್ಥಿಗಳ ಚಿಕಿತ್ಸೆಗೆ ಅಗತ್ಯ ಬಿದ್ದರೆ ಬೇರೆಡೆ ಸ್ಥಳಾಂತರಕ್ಕೆ ಸಿಎಂ ಸೂಚನೆ ನೀಡಿದ್ದಾರೆ" ಎಂದು ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ. ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿ ಹೇಳಿದರು.
"ಶಾಲಾ ಬಸ್ನಲ್ಲಿ 40 ಜನ ವಿದ್ಯಾರ್ಥಿಗಳಿದ್ದರು. ಇದರಲ್ಲಿ 17 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, 23 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡ 17 ವಿದ್ಯಾರ್ಥಿಗಳಲ್ಲಿ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ರಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರಿ ಬಸ್‌ನಲ್ಲಿದ್ದ 17 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ" ಎಂದು ಡಿಸಿ ಮಾಹಿತಿ ನೀಡಿದ್ದಾರೆ.
"ಪ್ರಕರಣ ಕುರಿತು ದೂರು ದಾಖಲಾಗಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ, ಶಾಲಾ ವಾಹನಗಳ ವೇಗದ ಚಾಲನೆ ಬಗ್ಗೆ ಎಲ್ಲ ಶಾಲೆಗಳಿಗೂ ಸೂಚನೆ ನೀಡುತ್ತೇವೆ" ಎಂದು ಎಸ್ಪಿ ಪುಟ್ಟಮಾದಮ್ಯ ತಿಳಿಸಿದರು.