ಬಾಗಲಕೋಟೆ: ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಪಿ.ಸಿ.ಗದ್ದಿಗೌಡರ ಅವರ ಹೆಸರು ಅಂತಿಮಗೊಂಡಿದೆ. ಈಗ ಕಾಂಗ್ರೆಸ್ ಪಕ್ಷದಲ್ಲಿ ಯಾರು ಪ್ರತಿಸ್ಪರ್ಧಿ ಆಗುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ವೀಣಾ ಕಾಶಪ್ಪನವರ ಹಾಗೂ ಅಜೇಯಕುಮಾರ ಸರನಾಯಕ ಅವರ ಹೆಸರು ಮುಂಚೂಣಿಯಲ್ಲಿದೆ. 2004 ರಿಂದ 2019 ರವೆಗೆ ಪಿ.ಸಿ.ಗದ್ದಿಗೌಡರ ಸತತ ನಾಲ್ಕು ಭಾರಿ ಜಯಗಳಿಸಿದ್ದಾರೆ. ಈಗ ಮತ್ತೆ ಐದನೇಯ ಬಾರಿ ಜಯಗಳಿಸುವ ಮೂಲಕ ಇತಿಹಾಸ ಬರೆಯಲು ಮುಂದಾಗಿದ್ದಾರೆ. ಆದರೆ ವೀಣಾ ಕಾಶಪ್ಪನವರು ಕಾಂಗ್ರೆಸ್ ಅಭ್ಯರ್ಥಿ ಆದಲ್ಲಿ ಭಾರೀ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ.
ತೀವ್ರ ಸ್ಪರ್ಧೆ ನೀಡಲು ಯುವ ಮತದಾರರನ್ನು ಸೆಳೆಯಲು ವೀಣಾ ಕಾಶಪ್ಪನವರಿಂದ ಮಾತ್ರ ಸಾಧ್ಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತ ಬಳಿಕ ಮನೆಯಲ್ಲಿ ಕುಳಿತುಕೊಳ್ಳಲಾರದೆ, ಇಡೀ ಲೋಕಸಭಾ ಕ್ಷೇತ್ರದಾದ್ಯಂತ ಸಂಚಾರ ಮಾಡಿ ಸಂಘಟನೆ ಹಾಗೂ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಈಗ ಇದು ಅವರಿಗೆ ಪ್ಲಸ್ ಆಗಿದೆ. ಇನ್ನು ಈಗಾಗಲೇ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಸ್ಪರ್ಧೆ ಮಾಡಲು ಆಗಲ್ಲ. ನನಗೆ ವಿಧಾನಸಭೆ ಮತಕ್ಷೇತ್ರವೇ ಸಾಕು, ಲೋಕಸಭೆ ಬೇಡಾ ಎಂದು ವರಿಷ್ಠರಿಗೆ ಮನವರಿಕೆ ಮಾಡಿದ್ದಾರೆ. ಹೀಗಾಗಿ ಈಗ ಅಜೇಯಕುಮಾರ ಸರನಾಯಕ ಹೆಸರು ಕೇಳಿ ಬರುತ್ತಿದೆ. ರೆಡ್ಡಿ ಸಮುದಾಯದ ಅಜೇಯ ಕುಮಾರ ಸರನಾಯಕ, ಈ ಹಿಂದೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಸೋಲು ಕಂಡಿದ್ದಾರೆ.
ಜಿಲ್ಲೆಯಲ್ಲಿ ರೆಡ್ಡಿ, ಕುರುಬ ಜನಾಂಗ, ಲಿಂಗಾಯುತರು ಹಾಗೂ ಅಲ್ಪ ಸಂಖ್ಯಾತರು ಸೇರಿ ಒಟ್ಟಾಗಿ ಬೆಂಬಲಿಸಿದರೆ ಗೆಲುವು ಖಚಿತ ಎಂಬುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ. ಈ ಮಧ್ಯೆ ವೀಣಾ ಕಾಶಪ್ಪನವರ ಲಿಂಗಾಯತ ಪಂಚಮಸಾಲಿ ಸಮುದಾಯದವರು ಇದ್ದು, ಜಿಲ್ಲೆಯಲ್ಲಿ ಗಾಣಿಗ ಸಮಾಜದ ಬಳಿಕ ಪಂಚಮಸಾಲಿ ಸಮುದಾಯವರು ಸಹ ನಿರ್ಣಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿದರೆ, ರೆಡ್ಡಿ ಸಮುದಾಯ, ಕುರುಬ ಹಾಗೂ ಅಲ್ಪ ಸಂಖ್ಯಾತರು, ಇತರರು ಸೇರಿ ಬೆಂಬಲಿಸಿದ್ರೆ ಈ ಬಾರಿ ಕಾಂಗ್ರೆಸ್ ಪಕ್ಷದ ಗೆಲವು ಖಚಿತ ಎಂದು ವೀಣಾ ಕಾಶಪ್ಪನವರು ವಿಶ್ವಾಸ ಹೊಂದಿದ್ದಾರೆ.
ಆದರೆ ಬಿಜೆಪಿ ಪಕ್ಷದ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಲಿಂಗಾಯತ ಗಾಣಿಗ ಸಮಾಜದವರಾಗಿದ್ದು, ನಿರ್ಣಾಯಕ ಮತದಾರರು ಇದ್ದಾರೆ. ಇನ್ನು ಅಜೇಯ ಕುಮಾರ ಸರನಾಯಕ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿದ್ದಾರೆ. ಮಾಜಿ ಸಚಿವ ಎಂಬುದು ಬಿಟ್ಟರೆ, ಇಡೀ ಲೋಕಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಿ, ವ್ಯೆಯಕ್ತಿಕ ವರ್ಚಸ್ಸು ಬೆಳೆಸಿಕೊಂಡಿಲ್ಲ. ಜೆ.ಎಚ್. ಪಟೇಲ ಮುಖ್ಯಮಂತ್ರಿ ಇದ್ದ ಸಮಯದಲ್ಲಿ ಕ್ರೀಡಾ ಸಚಿವರಾಗಿ ಕೆಲಸ ಮಾಡಿದ್ದರು. ಒಮ್ಮೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವುದು ಬಿಟ್ಟರೆ ರಾಜಕೀಯದಲ್ಲಿ ಇಂದಿನ ಯುವ ಮತದಾರರಿಗೆ ಹೆಚ್ಚು ಹತ್ತಿರ ಆಗುವಂತ ಕಾರ್ಯಕ್ರಮಗಳು ಹಾಗೂ ಸಂಘಟನೆ ಮಾಡಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ ಎಂಬುದು ಸದ್ಯದ ಕುತೂಹಲ.
ಇದನ್ನೂ ಓದಿ: ರಾಜಕೀಯದ ಸವಾಲುಗಳನ್ನು ಅರಿತುಕೊಂಡೇ ಬಂದಿದ್ದೇನೆ: ಯದುವೀರ್ ಒಡೆಯರ್