ವಿಜಯಪುರ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಇನ್ನಿತರ ಆರೋಪಿಗಳನ್ನ ಪರಪ್ಪನ ಅಗ್ರಹಾರದಿಂದ ಇತರೆ ಜೈಲುಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಪ್ರಕರಣದ A10 ಆರೋಪಿ ವಿನಯ್ನನ್ನ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತಿದೆ ಎಂಬುದು ತಿಳಿದುಬಂದಿದೆ.
ಈ ಹಿನ್ನೆಲೆ ಕಾರಾಗೃಹದ ಹೊರಗೆ ಹಾಗೂ ಒಳಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದರ್ಗಾ ಜೈಲು ಎಂದೇ ವಿಜಯಪುರ ಕೇಂದ್ರ ಕಾರಾಗೃಹ ಖ್ಯಾತಿ ಪಡೆದಿದೆ. ಈ ಜೈಲಿನಲ್ಲಿ ಒಟ್ಟು 15 ಸಪರೇಟ್ ಸೆಲ್ ಇವೆ. ನಟೋರಿಯಸ್ ರೌಡಿಗಳನ್ನ ಇರಿಸಲು 15 ಸೆಲ್ ಬಳಕೆ ಮಾಡಲಾಗುತ್ತಿದ್ದು, ಒಂದು ಸೆಲ್ನಲ್ಲಿ 3 ರಿಂದ 4 ಕೈದಿಗಳನ್ನ ಇರಿಸಲಾಗುತ್ತೆ. ಒಳಗೆ 10 ಬ್ಯಾರಕ್ ಇದ್ದು, ಒಂದು ಬ್ಯಾರಕ್‌ನಲ್ಲಿ 30 ಜನ ಖೈದಿಗಳನ್ನ ಇರಿಸಬಹುದು ಎಂಬುದು ತಿಳಿದುಬಂದಿದೆ. ಸದ್ಯ 436 ಕೈದಿಗಳಿದ್ದಾರೆ. ಈ ಜೈಲಿನಲ್ಲಿ 150 ಸಿಬ್ಬಂದಿ ಇದ್ದಾರೆ.
ದರ್ಗಾ ಜೈಲಿನ ಇತಿಹಾಸವನ್ನು ನೋಡುವುದಾದರೆ ಆದಿಲ್ ಶಾಹಿ ಕಾಲದಲ್ಲಿ 1648ರಲ್ಲಿ ಈ ಕಾರಾಗೃಹ ಕಟ್ಟಡವನ್ನ ನಿರ್ಮಾಣ ಮಾಡಲಾಗಿದೆ. ಆಗ ಆದಿಲ್ ಶಾಹಿ ವಿದೇಶಿ ವ್ಯಾಪಾರಿಗಳ ವಿಶ್ರಾಂತಿ ಕಟ್ಟಡವಾಗಿದ್ದ ಇದನ್ನ ಬಳಿಕ 1983ರಲ್ಲಿ ಜೈಲಾಗಿ ಮಾರ್ಪಾಡು ಮಾಡಲಾಗಿದೆ. ಈ ಕಟ್ಟಡ 30 ಅಡಿಗಳಷ್ಟು ಎತ್ತರದ ಗೋಡೆಗಳನ್ನ ಹೊಂದಿದೆ.
ಸುರಕ್ಷತೆ ದೃಷ್ಟಿಯಿಂದ ಈ ಆದಿಲ್ ಶಾಹಿ ಪ್ರವಾಸಿ ವ್ಯಾಪಾರಿ ಕಟ್ಟಡ ಜೈಲಾಗಿ ಪರಿವರ್ತನೆ ಮಾಡಲಾಗಿದೆ. ಬಳಿಕ ದರ್ಗಾ ಜೈಲ್ ಆಗಿ ಖ್ಯಾತಿ ಪಡೆದ ಕಟ್ಟಡ ಇದಾಗಿದೆ. ಇಲ್ಲಿ ಬನ್ನಂಜೆ ರಾಜ ಸಹಚರರು, ರವಿ ಪೂಜಾರಿ ಸಹಚರರು, ಹೆಬ್ಬೆಟ್ಟು ಮಂಜ, ಕೊರಂಗು ಕೃಷ್ಣಾ, ಸೈಲೆಂಟ್ ಸುನೀಲ್ ಸೇರಿದಂತೆ ಭೀಮಾತೀರದ ನಟೋರಿಯಸ್ ಹಂತಕ ಚಂದಪ್ಪ ಹರಿಜನ್ ಸೇರಿ ಎಲ್ಲ ಹಂತಕರು ಇದೇ ಜೈಲಲ್ಲಿದ್ದರು.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್; 9ನೇ ಆರೋಪಿ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ - A9 ACCUSED DHANRAJ JAIL SHIFT