ಬೆಂಗಳೂರು: ನಾಯಿಗಳತ್ತ ಕಲ್ಲು ಬೀಸಿದ್ದಕ್ಕೆ ನಡು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಹಲ್ಲೆ ಮಾಡಿ, ಸ್ಕೂಟರ್ ಕೀ ಕಿತ್ತುಕೊಂಡಿರುವ ಆರೋಪ ಕೇಳಿ ಬಂದಿದೆ.
ಅಕ್ಟೋಬರ್ 23ರಂದು ಮಧ್ಯಾಹ್ನ ಎನ್.ಆರ್.ಐ ಲೇಔಟ್ನಲ್ಲಿ ಘಟನೆ ನಡೆದಿದ್ದು, ಮಹಿಳೆಯೊಬ್ವರು ನೀಡಿರುವ ದೂರಿನ ಅನ್ವಯ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರುದಾರ ಮಹಿಳೆ ಸ್ನೇಹಿತರೊಂದಿಗೆ ಸ್ಕೂಟರ್ನಲ್ಲಿ ಬರುತ್ತಿದ್ದಾಗ ಕೆಲ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ಸ್ವಲ್ಪ ದೂರ ತೆರಳಿದ ಬಳಿಕ ಸ್ಕೂಟರ್ ನಿಲ್ಲಿಸಿದ್ದ ದೂರುದಾರೆ ನಾಯಿಗಳತ್ತ ಕಲ್ಲು ಬೀಸಿದ್ದಾರೆ. ಆ ಸಂದರ್ಭದಲ್ಲಿ ಬಂದ ವ್ಯಕ್ತಿಯೊಬ್ಬ ಸ್ಕೂಟರ್ ಕೀ ಕಿತ್ತುಕೊಂಡು, 'ನಾಯಿಗಳಿಗೆ ಕಲ್ಲು ಹೊಡೆದಿದ್ದು ಯಾಕೆ?' ಎಂದು ಜಗಳವಾಡಿದ್ದಾನೆ. ಅಲ್ಲದೇ ನಡು ರಸ್ತೆಯಲ್ಲಿ ತನ್ನನ್ನು ತಳ್ಳಾಡಿ, ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾನೆ. ನಂತರ ಆರೋಪಿಯ ಮನೆಯವರು ಬಂದು ಪರಿಸ್ಥಿತಿ ತಿಳಿಗೊಳಿಸಿ ಸ್ಕೂಟರ್ ಕೀ ಕೊಡಿಸಿದ್ದಾರೆ" ಎಂದು ಮಹಿಳೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನನ್ವಯ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೆ, ದೌರ್ಜನ್ಯವೆಸಗಿದ ಆರೋಪಿಯ ಹೆಸರು, ಫೋಟೋ ಹಾಗೂ ವಿಳಾಸ ನೀಡಿದರೂ ಸಹ ಪೊಲೀಸರು ಎಫ್ಐಆರ್ನಲ್ಲಿ ಆರೋಪಿಯನ್ನು ಹೆಸರಿಸಿಲ್ಲ ಹಾಗೂ ಆತನ ವಿಚಾರಣೆ ಕೂಡ ನಡೆಸಿಲ್ಲ ಎಂದು ಎಕ್ಸ್ ಆ್ಯಪ್ ಮೂಲಕ ದೂರುದಾರ ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಪ್ರಿಯಕರನ ಮೂಲಕ ಪತಿಯ ಹತ್ಯೆ: ದೂರಿನ ನಾಟಕವಾಡಿದ್ದ ಮಹಿಳೆ ಸಹಿತ ಐವರ ಬಂಧನ