ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಪೊಲೀಸ್ ಕಾನ್ಸ್ಟೇಬಲ್ ವಂಚಿಸಿರುವುದಾಗಿ ಆರೋಪಿಸಿ ನ್ಯಾಯ ಕೋರಿ ಕೆಲಸ ಮಾಡುತ್ತಿದ್ದ ಬಸವನಗುಡಿ ಪೊಲೀಸ್ ಠಾಣೆ ಮುಂದೆ ಕುಳಿತು ಸಂತ್ರಸ್ತ ಯುವತಿ ಏಕಾಂಗಿಯಾಗಿ ಪ್ರತಿಭಟಿಸಿದ್ದಾರೆ.
ವಂಚನೆ ಸಂಬಂಧ ಜಗಜೀವನ್ ರಾಮ್ ನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ವೊಬ್ಬರ ವಿರುದ್ಧ ಕಳೆದ ವರ್ಷ ದೂರು ದಾಖಲಿಸಿದ್ದರೂ ಪೊಲೀಸರು ಸೂಕ್ತ ಕ್ರಮಕೈಗೊಂಡಿಲ್ಲ. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದು ಹೊರಬಂದು ವಿವಾಹವಾಗುವುದಾಗಿ ಮತ್ತೆ ನಂಬಿಸಿದ್ದು, ಇದೀಗ ಕೈ ಕೊಟ್ಟಿದ್ದಾನೆ ಎಂದು ಆಪಾದಿಸಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗ ಮೂಲದ ಸಂತ್ರಸ್ತ ಯುವತಿ ಕಾನ್ಸ್ಟೇಬಲ್ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾಳೆ. ಉತ್ತರಹಳ್ಳಿಯಲ್ಲಿ ಯುವತಿ ವಾಸವಾಗಿದ್ದರೆ ಶಿರ್ಸಿ ಸರ್ಕಲ್ನ ಪೊಲೀಸ್ ವಸತಿ ಗೃಹದಲ್ಲಿ ಕಾನ್ಸ್ಟೇಬಲ್ ವಾಸವಾಗಿದ್ದ. ಒಂದೇ ಜಿಲ್ಲೆಯವರಾಗಿದ್ದರಿಂದ ಇಬ್ಬರ ನಡುವೆ ಪರಿಚಯವಾಗಿತ್ತು. ಕಾಲಕ್ರಮೇಣ ಇಬ್ಬರ ನಡುವೆ ಪ್ರೀತಿ ಮೂಡಿದೆ. ವಿವಾಹವಾಗುವುದಾಗಿ ನಂಬಿಸಿ ಬಲತ್ಕಾರ ಮಾಡಿರುವುದಾಗಿ ಯುವತಿ ಆರೋಪಿಸಿ ಕಳೆದ ವರ್ಷ ಆಗಸ್ಟ್ 28ರಂದು ದೂರು ನೀಡಿದ್ದಳು.
ಸ್ಥಳ ಆಧಾರದ ಮೇರೆಗೆ ಜೆ.ಜೆ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ನೀಡುತ್ತಿದ್ದಂತೆ ಕಾನ್ಸ್ಟೇಬಲ್ ನಿರೀಕ್ಷಣಾ ಜಾಮೀನು ಪಡೆದಿದ್ದ. ಇದಾದ ಬಳಿಕ ಮದುವೆಯಾಗುವುದಾಗಿ ನಂಬಿಸಿ ಭರವಸೆ ನೀಡಿದ್ದ. ಈ ಬಗ್ಗೆ ಪ್ರಸ್ತಾಪಿಸಿದರೆ ವಿವಾಹವಾಗುವುದಿಲ್ಲ ಎಂದು ಕ್ಯಾತೆ ತೆಗೆದಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಇದನ್ನೂ ಓದಿ: ಡಿಟಿಎಚ್ ರಿಚಾರ್ಚ್ ಮಾಡಲು ಲಿಂಕ್ ಒತ್ತಿ ಹಣ ಕಳೆದುಕೊಂಡ ಕಾನ್ಸ್ಟೆಬಲ್
ಯುವತಿ ಹೆಸರಲ್ಲಿ ವಾಟ್ಸ್‌ಆ್ಯಪ್ ಮೂಲಕ ವಂಚನೆ: ಇತ್ತೀಚೆಗೆ ನಡೆದ ಪ್ರಕರಣವೊಂದರಲ್ಲಿ ಯುವತಿಯ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಮೂಲಕ ವಂಚನೆ ಕೃತ್ಯವೆಸಗುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಸೆರೆ ಹಿಡಿದಿದ್ದರು. ಆರೋಪಿ ಹರಿ ಬೊಮ್ಮನಹಳ್ಳಿಯ ಎನ್.ಆರ್.ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ. ಲಾಡ್ಜ್ಗೆ ಬರುವ ಗ್ರಾಹಕರ ಫೋನ್ ನಂಬರ್ ಪಡೆದು ಬಳಿಕ ಹುಡುಗಿಯರ ಹೆಸರಿನಲ್ಲಿ ಮೆಸೇಜ್ ಮಾಡಿ, ಅವರಿಂದ ಖಾಸಗಿ ಫೋಟೋ ಪಡೆದು, ಅದೇ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ.
ಇದೇ ರೀತಿ ವ್ಯಕ್ತಿಯೊಬ್ಬರನ್ನು ಅನಿತಾ ಎಂಬ ಹೆಸರಿನಲ್ಲಿ ಸಂಪರ್ಕಿಸಿದ್ದ ಆರೋಪಿ, ಅನೈತಿಕ ಸಂಬಂಧದ ಸಂದೇಶ ಕಳುಹಿಸಿದ್ದ. ನಂತರ ಆ ಸಂದೇಶಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ, ಹಂತ ಹಂತವಾಗಿ ಒಟ್ಟು ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದ. ಈ ಬಗ್ಗೆ ಉತ್ತರ ವಿಭಾಗದ ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.