ಚಾಮರಾಜನಗರ: ಸಾಮಾನ್ಯರು ತಮ್ಮ ನೆಚ್ಚಿನ ಶಿಕ್ಷಕಿಯನ್ನು ನೆನೆಯುತ್ತಿದ್ದರೆ ಇಲ್ಲೊಬ್ಬ ವಿದ್ಯಾರ್ಥಿನಿ ತನ್ನ ಗುರುವಿನ ಕುರಿತು ಪುಸ್ತಕ ಬರೆದು 'ಇಂಡಿಯಾ ಬುಕ್ ಆಫ್ ರೆಕಾರ್ಡ್'ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಹೌದು, ಚಾಮರಾಜನಗರ ತಾಲೂಕಿನ ದೊಡ್ಡಮೋಳೆಯ ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಮತ್ತು ಗಣೇಶ್ ದಂಪತಿಯ ಪುತ್ರಿ, ಚಾಮರಾಜನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಿ.ಕಾಂ ತೃತೀಯ ವರ್ಷದ ವಿದ್ಯಾರ್ಥಿನಿ ಜಿ.ಅಮೃತಾ ಈ ಸಾಧನೆ ಮಾಡಿದವರು.
ಇವರು ತನ್ನ ಊರಿನ ಸರ್ಕಾರಿ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ. 6ನೇ ತರಗತಿ ಓದುವಾಗ ಸುಷ್ಮಾ ಎನ್ನುವವರು ಸಮಾಜ-ವಿಜ್ಞಾನ ಶಿಕ್ಷಕಿಯಾಗಿ ಶಾಲೆಗೆ ಬಂದರು. ಪ್ರಸ್ತುತ ಇವರು ನಂಜನಗೂಡಿನ ಬಿದರಗೂಡಿನ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಶಿಕ್ಷಕಿಯಿಂದ 8ನೇ ತರಗತಿಯವರೆಗೆ ಪಾಠ ಕೇಳಿದ್ದ ಅಮೃತಾ ಅತೀವ ಗೌರವ, ಪ್ರೀತಿಯ ಒಡನಾಟವನ್ನು ಬೆಳೆಸಿಕೊಂಡಿದ್ದರು. ಇದು ಎಷ್ಟರ ಮಟ್ಟಿಗೆ ಎಂದರೆ ಶಿಕ್ಷಣ ಮುಂದುವರೆಸಿ ಬಿ.ಕಾಂ ಪದವಿ ತರಗತಿಗೆ ಸೇರಿದರೂ ನೆಚ್ಚಿನ ಶಿಕ್ಷಕಿ ಮೇಲಿನ ಅಭಿಮಾನ ಹಾಗೇ ಇತ್ತು.
ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ಅಮೃತಾ ತನ್ನ ನೆಚ್ಚಿನ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದ ಸುಷ್ಮಾ ಕುರಿತು 'ನನ್ನ ಗುರುವೆಂಬ ಸುಗಮ' ಪುಸ್ತಕ ಬರೆಯಲಾರಂಭಿಸಿದ್ದರು. ಶಿಕ್ಷಕಿಯ ಗುಣ, ಇಬ್ಬರ ನಡುವಿನ ಒಡನಾಟವನ್ನು ಬರಹ ರೂಪಕ್ಕಿಳಿಸಿ, 16 ಕವಿತೆಗಳನ್ನು ರಚಿಸಿದ್ದರು.
ಒಂದು ವರ್ಷಗಳ ಕಾಲ ಕುಳಿತು ಬರೆದ ಈ ಪುಸ್ತಕವನ್ನು ಕಳೆದ ವರ್ಷ ಸಂವನ್ ಪಬ್ಲಿಕೇಷನ್ ಪ್ರಕಟಿಸಿದ್ದು, 2024ರ ಫೆ.27ರಂದು ಕೃತಿ ಬರೆದಿದ್ದ ಅಮೃತಾ ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಗರಿಮೆಗೆ ಪಾತ್ರರಾಗಿದ್ದಾರೆ.
16 ಕವಿತೆಗಳ ಪರಿಚಯ: 'ನನ್ನ ಗುರುವೆಂಬ ಸುಗಮ' ಶೀರ್ಷಿಕೆ ಗುರುವಿನ ಸನಿಹ ನನ್ನ ಧ್ಯಾನ ಎಂಬ ಅಡಿಬರಹದ 67 ಪುಟಗಳ ಕೃತಿಯಲ್ಲಿ 16 ಕವಿತೆಗಳನ್ನು ಅಮೃತಾ ತನ್ನ ನೆಚ್ಚಿನ ಶಿಕ್ಷಕಿ ಸುಷ್ಮಾ ಕುರಿತು ಬರೆದಿದ್ದಾರೆ. ಗುರುವೆಂದರೆ ಯಾರು?, ಗುರುವಿಗೆ ಹೃದಯ ಪೂರ್ವಕ ನಮನ, ಎತ್ತಲೋ ಸಾಗುತ್ತಿದ್ದ ಈ ಜೀವನದ ಹಾದಿಯಲಿ, ದಡ ಸೇರಿಸಲು ನಾವಿಕರಾಗಿ, ಇಲ್ಲದೇ ನಿಮ್ಮ ಮಾರ್ಗದರ್ಶನ, ಅದೇ ಮೊಗವು ಅದೇ ನಗುವು, ನೀವು ಹೇಳಿಕೊಟ್ಟ ನೈತಿಕತೆ ನೀತಿ, ದೇವತೆಯ ಆಗಮನ ಎಂಬಿತ್ಯಾದಿ ಮೊದಲ ಸಾಲುಗಳ ಕವಿತೆಗಳು ಪುಸ್ತಕದಲ್ಲಿವೆ.
ಈ ಕುರಿತು ಖುಷಿ ಹಂಚಿಕೊಂಡಿರುವ ಅಮೃತಾ, "ನನಗೆ ಸಣ್ಣಪುಟ್ಟ ಕವಿತೆಗಳನ್ನು ಬರೆಯುವ ಹವ್ಯಾಸವಿತ್ತು. ಕೋವಿಡ್ ಸಂದರ್ಭದಲ್ಲಿ ನೆಚ್ಚಿನ ಶಿಕ್ಷಕಿ ಸುಷ್ಮಾ ಅವರ ಕುರಿತು ಕೃತಿ ರಚಿಸಿದೆ. ಶಿಕ್ಷಕಿ ತಾಯಿ ಇದ್ದಂತೆ. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರುತ್ತದೆ ಎಂದು ಗೊತ್ತಿರಲಿಲ್ಲ. ಕೃತಿ ಬರೆದ ಬಳಿಕ ಸಾಹಿತ್ಯದತ್ತ ಮತ್ತಷ್ಟು ಆಸಕ್ತಿ ಬೆಳೆಸಿಕೊಂಡಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ: 63ರ ಹರೆಯದಲ್ಲಿ ಸೈಕ್ಲಿಂಗ್; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹುಬ್ಬಳ್ಳಿ ಸಾಧಕನ ದಾಖಲೆ