ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಖಂಡಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ಕರೆ ನೀಡಿರುವ ಬಂದ್‌ಗೆ ವಾಣಿಜ್ಯನಗರಿಯ ಮುಸ್ಲಿಂ ವ್ಯಾಪಾರಸ್ಥರು ತಮ್ಮ ವಹಿವಾಟುಗಳನ್ನು ಸಂಪೂರ್ಣ ಬಂದ್ ಮಾಡಿ ಬೆಂಬಲ ಸೂಚಿಸಿದ್ದಾರೆ.
ನಗರದ ಶಾಹ ಬಜಾರ್ ಮತ್ತು ನೂರಾನಿ ಮಾರ್ಕೆಟ್ ವ್ಯಾಪಾರಸ್ಥರು ಬಂದ್‌ಗೆ ಬೆಂಬಲ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅಂಗಡಿ- ಮುಂಗಟ್ಟುಗಳನ್ನ ಬಂದ್ ಮಾಡಿ ನೇಹಾ ಹತ್ಯೆಯನ್ನು ಖಂಡಿಸಿದ ವ್ಯಾಪಾರಿಗಳು, ಜಸ್ಟಿಸ್ ಟು ನೇಹಾ ಹಿರೇಮಠ ಎಂದು ತಮ್ಮ ಅಂಗಡಿಗಳಿಗೆ ಬೋರ್ಡ್‌ಗಳನ್ನ ಹಾಕಿ ಬೆಂಬಲ ಸೂಚಿಸಿದ್ದಾರೆ. ಜತೆಗೆ ಹಂತಕ ಫಯಾಜ್‌ನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬಿಜೆಪಿಯಿಂದ ಪ್ರತಿಭಟನೆ: ನೇಹಾ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ಹಳೇ ಹುಬ್ಬಳ್ಳಿಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಅಮರ್ ರಹೇ ನೇಹಾ ಹಿರೇಮಠ ಅಮರ್ ರಹೇ ಎಂದು ಘೋಷಣೆ ಕೂಗಿದರು.
ನೇಹಾ ಕೊಲೆ ಖಂಡಿಸಿ ಶ್ರೀರಾಮಸೇನೆಯಿಂದ ಪ್ರತಿಭಟನೆ: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹಿಸಿ ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಶ್ರೀರಾಮ ಸೇನಾದಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಹಕ್ಕೋತ್ತಾಯ ಮಾಡಿದ ಶ್ರೀರಾಮ ಸೇನಾ ಕಾರ್ಯಕರ್ತರು ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಹೇಯ ಕೃತ್ಯಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಪಾಲಿಸುವಲ್ಲಿ, ಹಿಂದೂಗಳಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ತಕ್ಷಣವೇ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ನೇಹಾ ಹತ್ಯೆಗೆ ಖಂಡನೆ: ಸ್ವಯಂಪ್ರೇರಿತ ಧಾರವಾಡ ಬಂದ್‌ಗೆ ಉತ್ತಮ ಪ್ರತಿಕ್ರಿಯೆ - Dharawad bandh