ಬೆಂಗಳೂರು: ಪ್ರಸಕ್ತ ಸಾಲಿನ ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ವೀರಶೈವ ಬಸವೇಶ್ವರರ ಚರಿತ್ರೆಗೆ ಸಂಬಂಧಿಸಿದಂತೆ ಅನೇಕ ಲೋಪದೋಷಗಳು ಪ್ರಕಟವಾಗಿದ್ದು, ಇವುಗಳನ್ನು ಸರಿಪಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಮನವಿ ಮಾಡಿದೆ.
ಈ ಕುರಿತು ಮೆಜೆಸ್ಟಿಕ್ನಲ್ಲಿರುವ ಸರ್ಪಭೂಷಣ ಶಿವಯೋಗಿಗಳ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, "ಹಿಂದೆ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ವೀರಶೈವ ಸಿದ್ಧಾಂತವನ್ನು ಬಸವಣ್ಣ ಹಾಗೂ ಅನುಯಾಯಿ ಶರಣರು ಪ್ರಚಾರಪಡಿಸಿದರು ಹಾಗೂ ಕೂಡಲ ಸಂಗಮದಲ್ಲಿ ಶೈವಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆ ಪಡೆದು ಧ್ಯಾನ ಸಾಧನೆ ಮಾಡಿದರು ಎಂದು ಪ್ರಕಟಿಸಲಾಗಿತ್ತು" ಎಂದು ಹೇಳಿದರು.
"ಆದರೆ, 2024ನೇ ಸಾಲಿನ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ವೀರಶೈವ ತತ್ವಪ್ರಚಾರಕರು ಎಂಬ ಮಾಹಿತಿಯನ್ನು ಕೈಬಿಟ್ಟು, ಬಸವಣ್ಣ ಅರಿವನ್ನೇ ಗುರುವಾಗಿಸಿಕೊಂಡು ಇಷ್ಟಲಿಂಗದ ಪರಿಕಲ್ಪನೆಯೊಂದಿಗೆ ದೇಹವೇ ದೇಗುಲವೆಂದು ಸ್ಥಾವರ ದೇವಾಲಯಗಳನ್ನು ನಿರಾಕರಿಸಿ, ಏಕದೇವನಿಷ್ಠೆಯನ್ನು ಪ್ರತಿಪಾದಿಸಿದರು ಎಂದು ಪ್ರಕಟಿಸಲಾಗಿದೆ. ಇದು ಬಸವೇಶ್ವರರ ಚರಿತ್ರೆಗೆ ದ್ರೋಹ ಬಗೆದಂತಿದೆ. ಧರ್ಮ, ಇತಿಹಾಸ ಮತ್ತು ಸಮಾಜಕ್ಕೆ ಸರ್ಕಾರ ಮಾಡುತ್ತಿರುವ ಅಪಚಾರವಾಗಿದೆ" ಎಂದರು.
"ಮಕ್ಕಳಲ್ಲಿ ಅನಗತ್ಯ ಸುಳ್ಳು ಮಾಹಿತಿಯಿಂದ ಗೊಂದಲ ಮೂಡಿಸುವ ನಡೆ ಇದಾಗಿದೆ. ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಹುನ್ನಾರ ಇದಾಗಿದೆ ಎಂಬ ಸಂಶಯ ಮೂಡಿದೆ. ಇದರಿಂದ ರಾಜಕೀಯ ಲಾಭ ಪಡೆಯಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡು ಗೊಂದಲ ಮೂಡಿಸಲಾಗುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಂಧಗಿಯ ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಮಹಾರಾಷ್ಟ್ರದಿಂದ ಡಾ.ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ವಿಭೂತಿಪುರ ಮಠದ ಕಫಿಲಧಾರ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆಯ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಫಾಳಾದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರಿನ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ರಟ್ಟೆಹಳ್ಳಿಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ 30 ಜನ ಮಠಾಧೀಶರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.