ದಾವಣಗೆರೆ: ಯಾರೋ ಹೋಗಿ ನಾಯಿ ಮಾಂಸ ತಂದಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಮಾಡಿ ಗಲಾಟೆ ಮಾಡಿದ್ದಾರೆ. ಹೀಗಾಗಿ ಪೊಲೀಸರು ಮತ್ತು ಆರೋಗ್ಯ ಇಲಾಖೆಯವರು ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿದ್ದಾರೆ. ಅದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ ಎಂದು ವರದಿ ಬಂದಿದೆ ಎಂದು ಅವರು ಹೇಳಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಯಿ ಮಾಂಸ ವಿಚಾರವಾಗಿ ಪ್ರತಿಕ್ರಿಯಿಸಿ, ಮಾಂಸದ ವ್ಯಾಪಾರಿ ರಾಜಸ್ಥಾನದಿಂದ ಪ್ರತಿ ವಾರಕ್ಕೆ, 15 ದಿನಗಳಿಗೊಮ್ಮೆ ಅಥವಾ ಬೇಕಾದ ಸಂದರ್ಭದಲ್ಲಿ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ಅನಾವಶ್ಯಕವಾಗಿ ಏನೇನೂ ದುರುದ್ದೇಶ ಇಟ್ಟುಕೊಂಡು ಗಲಾಟೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.
ಏನಿದು ಪ್ರಕರಣ; ಜುಲೈ 26ರಂದು ರಾಜಸ್ಥಾನದಿಂದ ಬೆಂಗಳೂರಿನ ಮಾಂಸದ ವ್ಯಾಪಾರಿ ರಜಾಕ್ ಎಂಬುವರು ರೈಲಿನ ಮೂಲಕ ತಂದ ಮಾಂಸದ ಬ್ಯಾಗನ್ನಲ್ಲಿ ನಾಯಿ ಮಾಂಸ ಕಲಬೆರಕೆ ಆಗಿದೆ ಎಂದು ಹಿಂದೂ ಸಂಘಟನೆಯ ಪುನೀತ್ ಕೆರೆಹಹಳ್ಳಿ ಆರೋಪಿಸಿ, ರೈಲು ನಿಲ್ದಾಣದಲ್ಲಿ ಮಾತಿನ ಚಕಮಕಿ ನಡೆಸಿದ್ದರು. ಆಗ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಕೆರೆಹಳ್ಳಿ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಮಾಂಸದ ಮಾದರಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಪಡೆದಿದ್ದರು. ಲೋಪದೋಷಗಳು ಕಂಡುಬಂದಲ್ಲಿ ನಿಯಾಮನುಸಾರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದರು.
ಬಿಜೆಪಿಯಿಂದ ಪಾದಯಾತ್ರೆ ರಾಜಕೀಯ; ಬಿಜೆಪಿಯಿಂದ ಮೈಸೂರು ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ನಾವು ಬಳ್ಳಾರಿ ಪಾದಯಾತ್ರೆ ಮಾಡಿದ್ದು ನಾಡಿನ ನೆಲ ಉಳಿಸಲು, ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಲು. ಆದರೆ ಬಿಜೆಪಿಯವರು ಉದ್ದೇಶಪೂರ್ವಕವಾಗಿ ಯಾವುದೇ ಸತ್ಯಾಂಶ ಇಲ್ಲದ ವಿಚಾರ ಇಟ್ಟುಕೊಂಡು ಸಿಎಂ ವಿರುದ್ಧ ಆರೋಪ ಮಾಡ್ತಿದ್ದಾರೆ. ಇದೇ ವಿಚಾರ ಸಂಬಂಧ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಸಿಎಂ ಅವರು ನೇರವಾಗಿ ಧೈರ್ಯದಿಂದ ಉತ್ತರಿಸಿದ್ದಾರೆ. ಆದರೆ ಬಿಜೆಪಿಯವರು ಪಾದಯಾತ್ರೆ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಮುಡಾದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲಾ. ಈಗಾಗಲೇ ಎಸ್ಐಟಿ, ಸಿಬಿಐ ಮತ್ತು ಇಡಿ ತನಿಖೆ ನಡೆಯುತ್ತಿದೆ. ಅವ್ಯವಹಾರ ಆಗಿದ್ದರೇ ಸೂಕ್ತ ಕ್ರಮ ಆಗುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದು ಪರಮೇಶ್ವರ್ ಹೇಳಿದರು.
ರಾಜ್ಯ ಸರ್ಕಾರ ಶಿಷ್ಟಾಚಾರದ ಪ್ರಕಾರ ನಡೆದುಕೊಳ್ಳುತ್ತೆ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ನಂಜನಗೂಡು ಪ್ರವಾಸಿ ಮಂದಿರ ನೀಡದೆ ಇರುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಶಿಷ್ಟಾಚಾರ ಪ್ರಕಾರ ರಾಜ್ಯ ಸರ್ಕಾರದಿಂದ ಏನು ಕೊಡಬೇಕೋ ಅದನ್ನು ಕೊಡುತ್ತದೆ. ಇಂತಹ ವಿಚಾರದಲ್ಲಿ ನಾವು ಸಣ್ಣತನದ ರಾಜಕಾರಣ ಮಾಡುವುದಿಲ್ಲ ಎಂದರು.
ಇದನ್ನೂ ಓದಿ: