ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಗರದ ಹೊರವಲಯ ಉತ್ತನಹಳ್ಳಿ ಆವರಣದಲ್ಲಿ ಆಯೋಜಿಸಿದ್ದ 'ಯುವ ದಸರಾ'ದ 4ನೇ ದಿನದ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು. ಹೆಸರಾಂತ ಸಂಗೀತ ನಿರ್ದೇಶಕ, ಸಂಯೋಜಕರಾದ ಎ.ಆರ್.ರಹಮಾನ್ ಹಾಗೂ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಕಂಠಸಿರಿ ಯುವ ದಸರಾದ ಮೆರುಗು ಹೆಚ್ಚಿಸಿತು.
'ಜೈ ಹೋ' ಗೀತೆಯ ಮೂಲಕ ಆಗಮಿಸಿ, ಪ್ರೇಕ್ಷಕರೆದುರು ಎಂಟ್ರಿ ಕೊಟ್ಟ ರಹಮಾನ್, ದೇಶ ಭಕ್ತಿಗೀತೆಗಳ ಮೂಲಕ ಕಾರ್ಯಕ್ರಮ ಆರಂಭಿಸಿ ರೋಮಾಂಚನಗೊಳಿಸಿದರು. 'ಫನಾ ಫಾನ' ಗೀತೆಯ ಬೀಟ್ಸ್ಗಳಿಗೆ ಯುವ ಸಮೂಹವು ಕುಣಿದು ಕುಪ್ಪಳಿಸಿತು. ರಹಮಾನ್ ಕಂಠದಿಂದ ಮೂಡಿಬಂದ 'ಧಮ್ ದಾರ ಧಮ್ ದಾರ ವಾಸ್ತು ಧಮ್ ದಾರ' ಗೀತೆಗೆ ಪ್ರೇಕ್ಷಕರು ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿ ಯುವ ಸಂಭ್ರಮದಲ್ಲಿ ತೇಲಾಡಿದರು.
'ಎನ್ನ ಸೋಣ ರಬ್ ನೆ ಬನಾಯಾ', 'ಎ ಮಸಕಲಿ ಮಸಕಲಿ', 'ದಮ್ ದರ ದಮ್ ದರ', 'ಕಿರುನಗೆ ಕಿರುನಗೆ ಹೃದಯದಲ್ಲಿ' ಗೀತೆ ಹೀಗೆ ಸುಮಾರು 20ಕ್ಕಿಂತ ಅಧಿಕ ಕನ್ನಡ, ತಮಿಳು, ಹಿಂದಿ ಗೀತೆಗಳ ಮೂಲಕ ಎ.ಅರ್.ರಹಮಾನ್ ಮತ್ತು ತಂಡದ ಗಾಯಕರು ಯುವ ಜನತೆಯ ಮನ ಸೆಳೆದರು.
ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಅವರ ಚಿತ್ರದ 'ಮುಕ್ಕಾಲ ಮುಕಾಬುಲಾ' ಗೀತೆಯ ಜೊತೆಗೆ ಯುವ ಮನಸ್ಸುಗಳು ತಾಳ ಹಾಕಿದರು. 'ವಿರಪಂಡಿಯನ್' ಚಿತ್ರದ ಗೀತೆಗೆ ಹಿನ್ನೆಲೆ ಗಾಯಕಿ ಶ್ವೇತಾ ಮೋಹನ್ ಧ್ವನಿಗೂಡಿಸಿ ಕೇಳುಗರ ಮನಗಳಿಗೆ ಮುದ ನೀಡಿದರು. 'ಘರ್ ಆಜಾ ಘರ್ ಆಜಾ' ಗೀತೆಯ ಜೊತೆಗೆ ರ್‍ಯಾಪ್ ಬೀಟ್ಸ್ ಆರಂಭಿಸಿದ ಶ್ವೇತಾ ಮೋಹನ್, ಸ್ಪೀಕರ್ ಬೀಟ್ಸ್ ಜೊತೆಗೆ ಎದೆ ಝಲ್ ಎನ್ನುವಂತೆ ಮಾಡಿದರು. ಅಲ್ಲದೆ, 'ರಾಧೆ ಕೆ ಮೇ ಕೈಸೆ ಚಲೇ', 'ರಾಧಾ ಕೆ ಮೇ ಚಲೇ', 'ದಿಯಾ ಚಲೇ ಚಾ ಚಲೇ' ಗೀತೆಯನ್ನು ನಾಟ್ಯದ ಜೊತೆಗೆ ಪ್ರಸ್ತುತಪಡಿಸಿದರು.
ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್, 'ಪಲ್ ಪಲ್ ಹೇ ಬಾರಿ' ಗೀತೆಯ ಹಾಡಿ ಅದೇ ಗೀತೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿ 'ರಾಮ ನಿನ್ನ ಮನದಲ್ಲಿ ರಾಮ ನನ್ನ ಮನದಲ್ಲಿ' ಎನ್ನುವ ಮೂಲಕ ಮೈಸೂರು ಜನರ ಮನಸೆಳೆದರು. 'ರೋಜಾ ಜಾನೆಮನ್' ಗೀತೆಯ ಅಲಪ್ಪದೊಂದಿಗೆ ಕನ್ನಡ, ಹಿಂದಿ ಹಾಗೂ ತಮಿಳು ಸೇರಿ ಮೂರೂ ಭಾಷೆಯಲ್ಲೂ ಕೂಡ ಗಾಯಕಿ ಶ್ವೇತಾ ಮೋಹನ್ ಅವರಿಗೆ ಧ್ವನಿಗೂಡಿಸಿದರು.
ಡ್ರಮ್ ಶಿವಮಣಿ ತಮ್ಮ ಬ್ಯಾಂಡ್ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು. ಸತತ 20 ನಿಮಿಷಗಳ ಕಾಲ ಬ್ಯಾಂಡ್ ಬಾರಿಸುತ್ತ ಕೇಳುಗರ ಕಿವಿಗಡಚಿಕ್ಕುವಂತೆ ಮಾಡಿದರು. ಪ್ರತಿಯೊಂದು ಬಿಟ್ಸ್ಗಳಿಗೂ ಯುವ ಸಮೂಹ ಕುಣಿಯಲಾರಂಭಿಸಿತ್ತು. ಬಿಟ್ಸ್ಗೆ ತಕ್ಕಂತೆ ಹೆಜ್ಜೆ ಜೊತೆಗೆ ಚಪ್ಪಾಳೆ, ಶಿಳ್ಳೆ, ಕೇಕೆ ಹಾಕುತ್ತ ರಿದಂ ಎಂಜಾಯ್ ಮಾಡಿದರು.
ಸಾಗರೋಪದಿಯಲ್ಲಿ ಹರಿದು ಬಂದ ಜನರು: ಯುವ ದಸರಾ ಕಾರ್ಯಕ್ರಮ ಆರಂಭವಾಗಿ 3 ದಿನ ಕಳೆದರೂ, ನಾಲ್ಕನೇ ದಿನವೂ ಜನಸಾಗರವೇ ಸೇರಿತ್ತು. ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಡಬೇಕಾಯಿತು. ಸಂಜೆ 5 ಗಂಟೆಯಿಂದಲೇ ಹೊರವಲಯ ರಸ್ತೆ ಜನಸಾಗರದಿಂದ ತುಂಬಿ ತುಳುಕುತ್ತಿತ್ತು. ಕಿಲೋಮೀಟರ್ಗಟ್ಟಲೇ ದೂರದವರೆಗೂ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.
ಇದನ್ನೂ ಓದಿ: ಮೈಸೂರು ದಸರಾ: ಅರಮನೆ ಮುಂಭಾಗ ಜಂಬೂ ಸವಾರಿ ಪುಷ್ಪಾರ್ಚನೆ ತಾಲೀಮು