ಗಂಗಾವತಿ (ಕೊಪ್ಪಳ) : ಯುವಕರಿಗೆ ಕನ್ಯೆಯರು ಸಿಗುತ್ತಿಲ್ಲ ಎಂಬ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಏಕೆಂದರೆ ಇದು ಒಬ್ಬಿಬ್ಬರ ಸಮಸ್ಯೆ ಅಲ್ಲ, ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಯುವ ರೈತರ ಗೋಳು ಕೇಳೋರೆ ಇಲ್ಲ ಎನ್ನುವಂತಾಗಿದೆ ಸದ್ಯದ ಪರಿಸ್ಥಿತಿ.
ಹೌದು, ದೇಶದ ಬೆನ್ನಲೆಬು, ದೇಶಕ್ಕೆ ಆಹಾರ ಕೊಡುವ ಅನ್ನದಾತ ಅಂತಾ ಹೇಳುವ ಬಹುತೇಕರು ರೈತರ ಮಕ್ಕಳಿಗೆ, ಯುವ ರೈತರಿಗೆ ಕನ್ಯೆ ಕೊಡಲು ಒಪ್ಪದಿರುವುದು ವಿಪರ್ಯಾಸ. ಹಾಗೇ ರೈತರನ್ನು ಒಪ್ಪಿ ಮದುವೆ ಮಾಡಿಕೊಳ್ಳಲು ಯುವತಿಯವರು ಹಿಂದೇಟು ಹಾಕುತ್ತಿರುವುದು ಮತ್ತೊಂದು ಕಾರಣ. ಹೀಗೆ ಕನ್ಯೆ ಹುಡುಕಿ ಹುಡುಕಿ ಸುಸ್ತಾಗಿರುವ ಕೊಪ್ಪಳ ಜಿಲ್ಲೆಯ ಯುವ ರೈತನೊಬ್ಬರು ಈಗ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಜನರ ನಾನಾ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ನೀವು ನಮ್ಮಂತ ಯುವಕರ ವೈಯಕ್ತಿಕ ಸಮಸ್ಯೆಗೂ ಆದ್ಯತೆ ನೀಡಬೇಕು. ಮದುವೆ ವಯಸ್ಸಿಗೆ ಬಂದ ನಮ್ಮಂತ ಯುವ ರೈತರಿಗೆ ಕನ್ಯೆ ಸಿಗುತ್ತಿಲ್ಲ. ಇದಕ್ಕೆ ಏನಾದರೂ ಪರಿಹಾರ ಕಲ್ಪಿಸಿ ಮದುವೆ ಮಾಡಿಸಿ.. ಎಂಬ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.
ಕನಕಗಿರಿಯಲ್ಲಿ ಬುಧವಾರ ಕೊಪ್ಪಳ ಜಿಲ್ಲಾಧಿಕಾರಿ ನಳೀನ್ ಅತುಲ್ ಅವರ ನೇತೃತ್ವದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಕನಕಗಿರಿ ಪಟ್ಟಣದ ಸಂಗಪ್ಪ ಶಿರಹಟ್ಟಿ ಎಂಬ 30 ವರ್ಷದ ಯುವಕ, ತಾನು ರೈತ ಎಂಬ ಕಾರಣಕ್ಕೆ ಕನ್ಯೆ ಸಿಗುತ್ತಿಲ್ಲ. ಇದು ನನ್ನೊಬ್ಬನ ಸಮಸ್ಯೆಯಲ್ಲ. ನನ್ನಂತ ನೂರಾರು ಜನರ ಸಮಸ್ಯೆಯಾಗಿದ್ದು, ಕೃಷಿ ಮಾಡಿಕೊಂಡು ಹೋಗುವ ನಮ್ಮಂಥ ಹುಡುಗರಿಗೆ ಕನ್ಯೆ ಸಿಗುತ್ತಿಲ್ಲ. ಸಿಕ್ಕರೂ ನನ್ನಂಥವರಿಗೆ ಮದುವೆ ಮಾಡಿಕೊಡಲು ಹುಡುಗಿಯರ ಪಾಲಕರು ಒಪ್ಪುತ್ತಿಲ್ಲ ಎಂದು ರೈತ ಸಂಗಪ್ಪ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ್ದಾರೆ.
ನವಲಿ ರಸ್ತೆಯಲ್ಲಿ ಆರು ಎಕರೆ ಜಮೀನಿದೆ. ಅಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಯತ್ನ ಮಾಡುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಮದುವೆಗೆ ಹುಡುಗಿಯರು ಸಿಗದೇ ಹೋದಲ್ಲಿ ನಮ್ಮಂಥ ಸಾವಿರಾರು ಯುವ ರೈತರು ಕೃಷಿ ಕಾಯಕದಿಂದ ವಿಮುಖವಾಗುವ ಸಾಧ್ಯತೆ ಇದೆ ಎಂದು ಯುವ ರೈತ ಅಳಲು ತೋಡಿಕೊಂಡಿದ್ದಾರೆ.
ಯುವಕ ನೀಡಿದ ಸಲಹೆ ಏನು ? : ಇತ್ತೀಚಿನ ದಿನಗಳಲ್ಲಿ ಹುಡುಗ-ಹುಡುಗಿಯರ ಜೋಡಿ ಹುಡುಕುವುದು ಕಷ್ಟಕರವಾಗುತ್ತಿರುವ ಹಿನ್ನೆಲೆ ಸಾಮಾನ್ಯವಾಗಿ ಆಯಾ ಜಾತಿ, ಧರ್ಮಗಳ ಪ್ರಮುಖರು ಆಗಾಗ್ಗೆ ವಧು-ವರರ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಪಾಲಕರ ನೆರವಿಗೆ ಧಾವಿಸುತ್ತಿದ್ದಾರೆ.
ಈ ವಧು-ವರರ ಸಮಾವೇಶದಲ್ಲಿ ತಮಗೆ ಸೂಕ್ತವಾಗುವ ಜೋಡಿಯನ್ನು ಯುವಕ ಮತ್ತು ಯುವತಿಯರು ಆರಿಸಿಕೊಳ್ಳುತ್ತಾರೆ. ಹಾಗೆಯೇ ಯುವ ರೈತರಿಗಾಗಿ ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಅವಿವಾಹಿತ ರೈತರಿಗಾಗಿ ವಧು-ವರರ ಸಮಾವೇಶ ಹಮ್ಮಿಕೊಳ್ಳಬೇಕು ಎಂದು ಈ ಯುವರೈತ ಸಂಗಪ್ಪ ಸಲಹೆ ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡ್ತೀನಿ ಎಂದು ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದ್ದಾರೆ.
ಇದನ್ನೂ ಓದಿ : ವರ್ಷ ಕಳೆದರೂ ಡಿಪಿಆರ್ ಆಗದ್ದಕ್ಕೆ ಕಾರ್ಯದರ್ಶಿಗಳಿಗೆ ಸಿಎಂ ಸಿದ್ದರಾಮಯ್ಯ ತೀವ್ರ ತರಾಟೆ - CM Siddaramaiah