ಹಾವೇರಿ: ಇಲ್ಲಿನ ದೇವಗಿರಿ ಗ್ರಾಮದ ನಿವಾಸಿ ಇಮ್ತಿಯಾಜ್ ಕುಂದೂರು ಎಂಬವರು ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಇವರ ಕುಟುಂಬಕ್ಕೆ ಇದೀಗ ಹೊಸ ಅತಿಥಿಯ ಆಗಮನವಾಗಿದೆ. ಈ ಹೊಸ ಅತಿಥಿಯೇ ಗಿಳಿರಾಮ.
ಹೌದು. ಇಮ್ತಿಯಾಜ್ ಮನೆಗೀಗ ಗಿಳಿ ಅಪರೂಪದ ಗೆಸ್ಟ್. ಇಮ್ತಿಯಾಜ್ ಎಂದಿನಂತೆ ಆಟೋ ಬಾಡಿಗೆ ಹೋಗಲು ದೇವಗಿರಿಯಿಂದ ಹಾವೇರಿಗೆ ಆಗಮಿಸುತ್ತಿದ್ದರಂತೆ. ಈ ಸಂದರ್ಭದಲ್ಲಿ ಮರದ ಕೆಳಗೆ ಪಕ್ಷಿಯೊಂದು ಒದ್ದಾಡುತ್ತಿದ್ದುದನ್ನು ನೋಡಿದ್ದಾರೆ. ಸಮೀಪ ತೆರಳಿದಾಗ ಗಿಳಿ ಎಂದು ಗೊತ್ತಾಗಿದೆ. ತಕ್ಷಣ ಅದನ್ನು ಮನೆಗೆ ತೆಗೆದುಕೊಂಡು ಬಂದು, ಇದೀಗ ಮನೆ ಸದಸ್ಯನಂತೆ ಸಾಕುತ್ತಿದ್ದಾರೆ.
ಮನೆ ಸದಸ್ಯರೊಂದಿಗೆ ಗಿಳಿ ಸ್ನೇಹಿತನಂತೆ ಓಡಾಡುತ್ತಿದೆ. ಇಮ್ತಿಯಾಜ್ ಅವರನ್ನು ಕಂಡರಂತೂ ಅಚ್ಚುಮೆಚ್ಚು. ಇಮ್ತಿಯಾಜ್ ಮನೆಗೆ ಬರುತ್ತಿದ್ದಂತೆ ಕೂಗುವ ಗಿಳಿ, ಅವರೊಂದಿಗೆ ಊಟ ಮಾಡುತ್ತದೆ. ಅಷ್ಟೇ ಏಕೆ? ಅವರ ಬಾಯಲ್ಲಿದ್ದ ಹಣ್ಣನ್ನೂ ಕಿತ್ತು ತಿನ್ನುತ್ತದೆ. ಈ ಗಿಳಿಗೆ ತೋತಾ ಎಂದು ಹೆಸರಿಟ್ಟಿದ್ದಾರೆ. ತೋತಾ ಎನ್ನುತ್ತಿದ್ದಂತೆ ತಿರುಗಿ ನೋಡುತ್ತದೆ
''ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಗಿಳಿಯನ್ನು ಆಟೋದಲ್ಲಿ ಕರೆದುಕೊಂಡು ಹೋಗುತ್ತೇನೆ. ಪ್ರಯಾಣಿಕರು ಸಹ ತೋತಾ ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಕೆಲವು ಪ್ರಯಾಣಿಕರು ಹಿಡಿದು ಆಟ ಆಡಿಸುತ್ತಾರೆ, ಮಾತನಾಡುವ ಪ್ರಯತ್ನ ಮಾಡುತ್ತಾರೆ'' ಎಂದು ಇಮ್ತಿಯಾಜ್ ಹೇಳಿದರು.
ಇದನ್ನೂ ಓದಿ: ನಾಪತ್ತೆಯಾದ ಪಂಜರದ ಗಿಳಿ.. ತನ್ನ ಮುದ್ದುಗಿಣಿ ಹುಡುಕಿ ಕೊಡುವಂತೆ ಠಾಣೆ ಮೆಟ್ಟಿಲೇರಿದ ಮಾಲೀಕ