ಶಿವಮೊಗ್ಗ: ಮುಸ್ಲಿಂ ಯುವಕ ಹಿಂದು ಸಂಪ್ರದಾಯದಂತೆ ತನ್ನ ಅಂಗಡಿಯಲ್ಲಿ ಲಕ್ಷ್ಮೀ ಪೂಜೆ ನಡೆಸಿ, ನಂತರ ಮುಸ್ಲಿಂರ ಸಂಪ್ರದಾಯದಂತೆ ಪ್ರಾರ್ಥನೆ ಮಾಡಿ ಭಾವೈಕ್ಯತೆ ಮೆರೆದ ಘಟನೆ ಹೊಸನಗರ ತಾಲೂಕು ರಿಪ್ಪನಪೇಟೆ ಗ್ರಾಮದಲ್ಲಿ ನಡೆದಿದೆ.
ರಿಪ್ಪನಪೇಟೆ ಸಮೀಪದ ಅರಸಾಳು ಗ್ರಾಮದ ತನ್ವೀರ್ ಎಂಬ ಯುವಕ ರಿಪ್ಪನಪೇಟೆಯ ವಿನಾಯಕ ವೃತ್ತದಲ್ಲಿರುವ ಜೊಹರಾ ಕಾಂಪ್ಲೆಕ್ಸ್ನಲ್ಲಿ "ತನ್ವಿ ಮೊಬೈಲ್ ವರ್ಡ್" ಎಂಬ ಅಂಗಡಿ ನಡೆಸುತ್ತಿದ್ದಾರೆ. ಪ್ರತಿ ವರ್ಷ ತಮ್ಮ ಅಂಗಡಿಯಲ್ಲಿ ಹಿಂದು ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು ಕಾಯಿ ನೈವೇದ್ಯ ಅರ್ಪಿಸುವ ಮೂಲಕ ಪುರೋಹಿತರಿಂದ ಲಕ್ಷ್ಮೀ ಪೂಜೆ ನೆರೆವೇರಿಸುತ್ತಾ ಬಂದಿದ್ದಾರೆ. ಅಂದೇ ಮುಸ್ಲಿಂ ಧರ್ಮಗುರುಗಳಿಂದ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಹಲವಾರು ವರ್ಷಗಳಿಂದ ಭಾವೈಕ್ಯತೆ ಸಾರುತಿದ್ದಾರೆ.
ಈ ಕುರಿತು ಈ ಟಿವಿ ಭಾರತ್ ಜೊತೆ ಮಾತನಾಡಿದ ಅಂಗಡಿ ಮಾಲೀಕ ತನ್ವೀರ್ ಅವರು, ನಾನು ಜಾತ್ಯಾತೀತಕ್ಕೆ ಬೆಂಬಲ ನೀಡುವವನು. ನಾನು ಮಂದಿರ, ಮಸೀದಿ ಹಾಗೂ ಚರ್ಚ್ಗೆ ಹೋಗುತ್ತೇನೆ. ನಾನು ನನ್ನ ಧರ್ಮವನ್ನು ಸೇರಿದಂತೆ ಎಲ್ಲಾ ಧರ್ಮವನ್ನು ಪ್ರೀತಿಸುತ್ತೇನೆ. ನಾನು ಅಂಗಡಿ ಪ್ರಾರಂಭಿಸಿ ನಾಲ್ಕು ವರ್ಷವಾಗಿದೆ. ಅಂದಿನಿಂದ ಇದೇ ರೀತಿ ಪೂಜೆ ನಡೆಸಿಕೊಂಡು ಬಂದಿದ್ದೇನೆ. ಪೂಜೆಗೆ ನಮ್ಮ ಕುಟುಂಬದವರು ನನ್ನ ಸ್ನೇಹಿತರು ಬಂದು ಶುಭ ಹಾರೈಸಿದ್ದಾರೆ" ಎಂದರು.
ಇದನ್ನೂ ಓದಿ: ಮೈಸೂರು ಅರಮನೆ ಆವರಣದಲ್ಲಿದೆ ಭುವನೇಶ್ವರಿ ದೇವಾಲಯ: ಇಲ್ಲಿ ಕನ್ನಡಾಂಬೆಗೆ ನಿತ್ಯ ಪೂಜೆ