ಮಂಗಳೂರು: ಬೇರೆ ವ್ಯಕ್ತಿಯನ್ನು ವಿವಾಹವಾಗಲು ಸಿದ್ಧವಾಗಿದ್ದ ಪ್ರೇಯಸಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೊಟ್ಟಿ ತಾಂಡಾದ ಸಂದೀಪ್ ರಾಥೋಡ್ (23) ಎಂಬಾತನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿದೆ.
ಪ್ರಕರಣದ ಹಿನ್ನೆಲೆ: ಈ ಪ್ರಕರಣದ ಆರೋಪಿ ಸಂದೀಪ್ ರಾಥೋಡ್ ಮತ್ತು ಮೃತ ಅಂಜನಾ ವಸಿಷ್ಠ ಅವರು 2018ನೇ ಇಸವಿಯ ಜುಲೈ ತಿಂಗಳಿನಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿ, ನಂತರ ಪರಸ್ಪರ ಪ್ರೀತಿಸುತ್ತಿದ್ದರು. ಉದ್ಯೋಗ ಪಡೆದ ಬಳಿಕ ಮದುವೆಯಾದರೆ ಜೀವನ ಸಾಗಿಸಲು ಹಣಕಾಸಿನ ತೊಂದರೆ ಇರುವುದಿಲ್ಲ ಮತ್ತು ಮನೆಯವರನ್ನು ಕೂಡ ಒಪ್ಪಿಸಿ ಮದುವೆಯಾಗಬಹುದು ಎಂದು ಅವರಿಬ್ಬರು ಮಾತನಾಡಿಕೊಂಡಿದ್ದರು.
ಅದರಂತೆಯೇ ಆರೋಪಿ ಸಂದೀಪ್ ರಾಥೋಡ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಲು ಲಿಖಿತ ಪರೀಕ್ಷೆಯ ಪೂರ್ವ ತಯಾರಿಗಾಗಿ ಮಂಗಳೂರಿನ ಹಂಪನಕಟ್ಟೆಯ ರಾಯಲ್ ಅಕಾಡೆಮಿ ಕೋಚಿಂಗ್ ಸೆಂಟರ್ಗೆ ಬಂದಿದ್ದನು. ತರಬೇತಿಗೆ ಹಾಜರಾಗಲು ಮಂಗಳೂರಿನಲ್ಲಿ ಉಳಿದುಕೊಳ್ಳುವ ಸಲುವಾಗಿ ತಾವಿಬ್ಬರು ಗಂಡ ಹೆಂಡತಿ ಎಂದು ಹಾಗೂ ಆರೋಪಿ ತಾನು ಕಾನ್ಸ್ಟೇಬಲ್ ಆಗಿದ್ದು, ಪಿಎಸ್ಐ ಹುದ್ದೆಯ ತರಬೇತಿಗಾಗಿ ಮಂಗಳೂರಿಗೆ ಬಂದಿರುವುದಾಗಿ ಹೇಳಿ ರೂಂ ಪಡೆದುಕೊಂಡಿದ್ದನು.
ಅಂಜನಾ ವಸಿಷ್ಠಳು ತನ್ನ ಊರಿಗೆ ಹೋಗಿದ್ದ ಅವಧಿಯಲ್ಲಿ, ಆಕೆಗೆ ವಿವಾಹ ಮಾಡಲು ಆಕೆಯ ತಂದೆ ತಾಯಿ ನಿರ್ಧರಿಸಿ ಹುಡುಗನನ್ನು ತೋರಿಸಿ, ಮಾತುಕತೆ ನಡೆಸಿದ್ದರು. ಅಂಜನಾ ವಸಿಷ್ಠ ತಂದೆ ತಾಯಿಯ ಆಸೆಯಂತ ಮದುವೆಗೆ ಒಪ್ಪಿಕೊಂಡು, ಆ ವಿಚಾರವನ್ನು ಆರೋಪಿ ಸಂದೀನ್ ರಾಥೋಡ್ಗೆ ತಿಳಿಸಿದ್ದಳು. ತನ್ನನ್ನು ಮರೆತುಬಿಡುವಂತೆ ಆಕೆ ವಿನಂತಿಸಿದ್ದಳು.
ಇದರಿಂದ ಕೋಪಗೊಂಡ ಸಂದೀಪ್ ಆಕೆಯನ್ನು ಪುಸಲಾಯಿಸಿ, ಆತ ಉಳಿದುಕೊಂಡಿದ್ದ ಮಂಗಳೂರಿಗೆ ಕರೆಸಿಕೊಂಡಿದ್ದ. ಅಂಜನಾ ವಸಿಷ್ಠ ತನ್ನನ್ನು ಬಿಟ್ಟು ತನ್ನ ಪ್ರೀತಿಯನ್ನು ಧಿಕ್ಕರಿಸಿ ಬೇರೆಯವರನ್ನು ಮದುವೆಯಾಗಲು ಹೋಗುತ್ತಿದ್ದಾಳೆ ಎಂದು ಕೋಪದಿಂದ ಆಕೆಯ ಜೊತೆ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಹಿಡಿದು ಎಳೆದು ಬೆಡ್ಡಿನ ಮೇಲೆ ದೂಡಿ ಹಾಕಿ ತಲೆಯನ್ನು ರೂಮಿನಲ್ಲಿದ್ದ ಕಬ್ಬಿಣದ ಮಂಚದ ಸರಳಿನ ಸಂದಿಗೆ ತುರುಕಿಸಿ, ಅಲ್ಲಿಯೇ ಪಕ್ಕದಲ್ಲಿ ಗೋಡೆಗೆ ಅಳವಡಿಸಿದ ಟಿ.ವಿ ಕೇಬಲ್‌ನಿಂದ ಕುತ್ತಿಗೆಗೆ ಸುತ್ತ ಬಿಗಿದು ಕೊಲೆ ಮಾಡಿ ಮೃತಳ ಮೃತ ದೇಹದ ಫೋಟೋವನ್ನು ನೆನಪಿಗಾಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು, ಮೃತಳ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಫೋನ್ನನ್ನು ತೆಗೆದುಕೊಂಡು ಪರಾರಿಯಾಗಿದ್ದ.
ಆ ಬಳಿಕ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಬಳಸಿ 15,000/- ರೂಪಾಯಿ ಹಣವನ್ನು ಡ್ರಾ ಮಾಡಿದ್ದನು. ಕೊಲೆ ಪ್ರಕರಣದ ತನಿಖಾಧಿಕಾರಿ ದೂರುದಾರರು ನೀಡಿದ ದೂರನ್ನು ಸ್ವೀಕರಿಸಿ, ಪ್ರಕರಣ ದಾಖಲಿಸಿ, ನಂತರ ಆರೋಪಿಯನ್ನು ಬಂಧನ ಮಾಡಿ ಆತನ ವಶದಿಂದ ಮೃತಳ ಮೊಬೈಲ್ ಮತ್ತು ಎಟಿಎಂ ಕಾರ್ಡ್ ಮತ್ತು ಆತ ತನ್ನ ಮೊಬೈಲ್‌ನಲ್ಲಿ ಮಾಡಿದ ಮೃತಳ ಮೃತ ದೇಹದ ವಿಡಿಯೋ ಇರುವ ಮೊಬೈಲ್, ಮೃತಳ ಎಟಿಎಂ ಕಾರ್ಡ್ ನಿಂದ ಕಾರ್ಪೋರೇಷನ್ ಬ್ಯಾಂಕಿನ ಎಟಿಎಂನಲ್ಲಿ ಹಣ ಡ್ರಾ ಮಾಡಿ ಉಳಿದ 12.300 ರೂಪಾಯಿ ಹಣವನ್ನು ಹಾಗೂ ಇತರೆ ಸೊತ್ತುಗಳನ್ನು ಆರೋಪಿಯಿಂದ ವಶಪಡಿಸಿಕೊಂಡಿದ್ದರು.
ಮೃತದೇಹದ ಮಹಜರು ಸಮಯದಲ್ಲಿ ಮೃತಳ ಮೈಮೇಲೆ ದೊರತ ಹಾಗೂ ವೈದ್ಯರು ಆರೋಪಿ ದೇಹದಿಂದ ಸಂಗ್ರಹಿಸಿದ ಸಾಕ್ಷ್ಯಗಳನ್ನು ಮಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಹಾಗೂ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಡಿಎನ್ಎ ವಿಭಾಗಕ್ಕೆ ತಜ್ಞರ ಪರಿಶೀಲನೆಗೆ ಕಳುಹಿಸಿರುತ್ತಾರೆ. ಆರೋಪಿಯಿಂದ ವಶಪಡಿಸಿದ್ದ ಮೊಬೈಲ್‌ಗಳನ್ನು, ಎಟಿಎಂನ ಸಿಸಿಟಿವಿ ಸಾಕ್ಷ್ಯವನ್ನು ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿಗಳನ್ನು ಸಂಗ್ರಹಿಸಿರುತ್ತಾರೆ. ಆರೋಪಿ ಮತ್ತು ಮೃತಳ ಕರೆ ವಿವರಗಳನ್ನು ಕಲೆ ಹಾಕಿ ತನಿಖೆ ನಡೆಸಿದ್ದರು.
ಈ ಪ್ರಕರಣದಲ್ಲಿ ಒಟ್ಟು 45 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು. ಒಟ್ಟು 100 ದಾಖಲೆಗಳನ್ನು ಗುರುತಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರವೀಂದ್ರ ಎಮ್ ಜೋಶಿ ಯವರು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 25,000/- ರೂಪಾಯಿ ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಸಜೆ ಮತ್ತು ಭಾ.ದಂ.ಸಂ ಕಲಂ 380 ಅಪರಾದದಲ್ಲಿ 3 ತಿಂಗಳ ಸಜೆ ಮತ್ತು 1,000/- ರೂಪಾಯಿ ದಂಡ ದಂಡ ತೆರಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಸಜೆ, ಭಾ.ದಂ.ಸಂ ಕಲಂ 403 ಅಪರಾಧಕ್ಕೆ 3 ತಿಂಗಳ ಸಜೆ ಮತ್ತು 500/- ರೂಪಾಯಿ ದಂಡ. ದಂಡ ಕಟ್ಟಲು ತಪ್ಪಿದಲ್ಲಿ 15 ದಿನಗಳ ಸಾದಾ ಸಜೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ಮೃತಳ ಮನೆಯವರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ನಿವೃತ್ತ ಸರ್ಕಾರಿ ಅಭಿಯೋಜಕ ಬಿ. ಶೇಖರ್ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್ ಒಲ್ಗ ಮಾರ್ಗರೆಟ್ ಕ್ರಾಸ್ತಾ ಹೆಚ್ಚುವರಿ ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.
ಇದನ್ನೂ ಓದಿ: ಕಡಬ ವಿದ್ಯಾರ್ಥಿನಿಯರ ಆ್ಯಸಿಡ್ ದಾಳಿ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾ - Kadaba Acid Attack Case