ಬೆಂಗಳೂರು: ತನ್ನ ಕಾಲು ತುಳಿದ ಎಂಬ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ತಡರಾತ್ರಿ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಸೊಣ್ಣೇನಹಳ್ಳಿಯಲ್ಲಿ ನಡೆದಿದೆ. ಮೂರ್ತಿ (52) ಎಂಬವರ ಹೊಟ್ಟೆಗೆ ಚಾಕುವಿನಿಂದ ಇರಿದು ಆರೋಪಿ ಕೀರ್ತಿ (27) ಹತ್ಯೆಗೈದಿದ್ದಾನೆ.
ಮೂರ್ತಿ ಹಾಗೂ ಕೀರ್ತಿ ನೆರೆಹೊರೆಯವರು. ಮೂರ್ತಿ ಹಸು ಸಾಕಾಣಿಕೆ ಕೆಲಸ ಮಾಡುತ್ತಿದ್ದರು. ಕೀರ್ತಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ. ಮೂರ್ತಿ ಅವರ ಸಹೋದರನ ಮನೆಯಲ್ಲಿ ಭಾನುವಾರ ಪಿತೃಪಕ್ಷದ ಪೂಜೆ ಇದ್ದುದರಿಂದ ಅಕ್ಕಪಕ್ಕದ ಮನೆಯವರು, ಸಂಬಂಧಿಕರು ಸೇರಿದ್ದರು.
ರಾತ್ರಿ ಮನೆಯಲ್ಲಿ ಮದ್ಯಪಾನ ಮಾಡುತ್ತಾ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಪಾನಮತ್ತ ಮೂರ್ತಿ ಆರೋಪಿಯ ಕಾಲು ತುಳಿದಿದ್ದಾರೆ. ಇದರಿಂದ ಕೋಪಗೊಂಡ ಕೀರ್ತಿ ಗಲಾಟೆ ಮಾಡಿ ಮೂರ್ತಿಯ ಹೊಟ್ಟೆಗೆ ಚಾಕು ಇರಿದಿದ್ದಾನೆ. ಪರಿಣಾಮ, ತೀವ್ರ ರಕ್ತಸ್ರಾವದಿಂದ ಮೂರ್ತಿ ಸಾವನ್ನಪ್ಪಿದ್ದಾರೆ.
ಜ್ಞಾನಭಾರತಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಕೀರ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ತಾಯಿ, ಎರಡು ಮಕ್ಕಳ ಮೃತದೇಹ ಬಾವಿಯಲ್ಲಿ ಪತ್ತೆ, ಕೊಲೆ ಶಂಕೆ - Chikkodi Mother And Children Death