ಕಾರವಾರ: ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ವ್ಯಕ್ತಿ ನಾಪತ್ತೆಯಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಇದುವರೆಗೆ ಏಳು ಮಂದಿ ಮೃತಪಟ್ಟಿದ್ದು, ನಾಪತ್ತೆಯಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಗೋಕರ್ಣ ಬಳಿಯ ಗಂಗೆಕೊಳ್ಳ ಮೂಲದ ಯುವಕ ಲೊಕೇಶ್ ನಾಪತ್ತೆಯಾದವರು. ಯುವಕನ ತಾಯಿ ಮಾದೇವಿ, ಮಗನನ್ನು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಐದು ದಿನಗಳಿಂದ ಮಗ ಮನೆಗೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಗೋವಾದಲ್ಲಿ ಬೋಟ್ ರಿಪೇರಿ ಕೆಲಸ ಮಾಡುತ್ತಿದ್ದ ಲೊಕೇಶ್, ಜ್ವರದಿಂದಾಗಿ ರಜೆ ಪಡೆದು ಮನೆಗೆ ಬಂದಿದ್ದರಂತೆ. ಗುಡ್ಡ ಕುಸಿದ ದಿನ ಶೃಂಗೇರಿಗೆ ಹೋಗಿ ಬರುವುದಾಗಿ ತೆರಳಿದ್ದಾರೆ. ಆದರೆ ಕಳೆದ ಐದು ದಿನಗಳಿಂದಲೂ ಮನೆಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶಿರೂರು ಗುಡ್ಡ ಕುಸಿತ ಪ್ರಕರಣ: ಜುಲೈ 16ರಂದು ಭಾರಿ ಮಳೆಯಿಂದಾಗಿ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಮಣ್ಣಿನಡಿ ಸಿಲುಕಿ ಸ್ಥಳದಲ್ಲೇ ನಾಲ್ವರು ಜೀವ ಕಳೆದುಕೊಂಡಿದ್ದರು. ಮಣ್ಣು ತೆರವು ಮತ್ತು ಕಾಣೆಯಾದವರ ಶೋಧ ಕಾರ್ಯಾಚರಣೆಯ ವೇಳೆ ಮತ್ತೆ ಮೂವರ ಶವಗಳು ಪತ್ತೆಯಾಗಿದ್ದವು. ಇದುವರೆಗೂ ಒಟ್ಟು ಏಳು ಜನ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ನಾಲ್ವರು ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರೆದಿದೆ. ಘಟನೆ ಸಂಭವಿಸಿದ್ದ ವೇಳೆ ಸ್ಥಳದಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ: ನಾಪತ್ತೆಯಾದ ತಂದೆಯನ್ನು ಹುಡುಕಿಕೊಡುವಂತೆ ಹೆಣ್ಣು ಮಕ್ಕಳ ಮನವಿ - Shiruru Hill Collapse