ಬೆಂಗಳೂರು: ಶೀಲ ಶಂಕಿಸಿ ಪತಿಯೇ ಪತ್ನಿಯನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜೀವನ್ ಭೀಮಾನಗರ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಚೆಲ್ಲಘಟ್ಟದ ನಿವಾಸಿ ಸಂಗೀತಾ (30) ಹತ್ಯೆಯಾದ ಗೃಹಿಣಿ. ಕೃತ್ಯದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಆಕೆಯ ಪತಿ ನಾಗರಾಜನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಸಂಗೀತಾಗೆ 6 ವರ್ಷಗಳ ಹಿಂದೆ ನಾಗರಾಜನೊಂದಿಗೆ ಮದುವೆಯಾಗಿದ್ದು, ದಂಪತಿಗೆ 4 ವರ್ಷದ ಮಗು ಇದೆ. ದಂಪತಿ ತಡರಾತ್ರಿ ಕುಳ್ಳಪ್ಪ ಗಾರ್ಡನ್ನಲ್ಲಿರುವ ಸಂಬಂಧಿ ಮನೆಗೆ ಬಂದಿದ್ದು, ಈ ವೇಳೆ ಮದ್ಯದ ಅಮಲಿನಲ್ಲಿದ್ದ ಆರೋಪಿ ನಾಗರಾಜ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ.
ಬಳಿಕ ಆಕೆಯನ್ನು ಕೆಳಗೆ ತಳ್ಳಿ ಕತ್ತು ಕೊಯ್ದು ಕೊಲೆಗೈದಿದ್ದಾನೆ. ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆ ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜೀವನ್ ಭೀಮಾ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಹಳೆ ಪ್ರಕರಣ: ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹುಣಸೂರಿನ ನರಸಿಂಹ ಸ್ವಾಮಿ ಬಡಾವಣೆ ನಿವಾಸಿ ಪ್ರವೀಣ್ ಕುಮಾರ್ಗೆ ಹುಣಸೂರಿನಲ್ಲಿರುವ ಮೈಸೂರಿನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು.
ಪ್ರಕರಣದ ವಿವರ: ಒಂದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮೃತ ಮಹಿಳೆಯ ಪತಿ ಮತ್ತು ಕೊಲೆ ಆರೋಪಿ ಸಹೋದ್ಯೋಗಿಗಳಾಗಿದ್ದರು. ಅಪರಾಧಿ ಪ್ರವೀಣನು ರಾಮಕೃಷ್ಣಗೌಡ ಅವರ ಪತ್ನಿ ಮೇಲೆ ಕಣ್ಣಾಕಿದ್ದ. ಅಲ್ಲದೆ, ಆ ಮಹಿಳೆಗೆ ಆಗಾಗ್ಗೆ ಮನೆಗೆ ಬಂದು ಪೀಡಿಸುತ್ತಿದ್ದ. ಆಕೆ ಪ್ರತಿರೋಧವೊಡ್ಡಿ ಆತನ ಕುಟುಂಬಸ್ಥರೆದುರು ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಳು.
ಇದಕ್ಕೂ ಮೊದಲು ಪ್ರವೀಣನ ಅನುಚಿತ ವರ್ತನೆ ಬಗ್ಗೆ ತಿಳಿದಾಗ ರಾಮಕೃಷ್ಣಗೌಡ ಸಾಕಷ್ಟು ಬಾರಿ ಬುದ್ಧಿವಾದ ಸಹ ಹೇಳಿದ್ದರು. ಅಷ್ಟಾದರೂ ಪ್ರವೀಣ್ ಸರಿ ದಾರಿಗೆ ಬರದ ಕಾರಣ ಕಂಪನಿಯ ಹಿರಿಯರ ಬಳಿ ಹೇಳಿದಾಗ ನ್ಯಾಯ ಪಂಚಾಯಿತಿ ಮಾಡಿಸಿ, ಪ್ರವೀಣ್ನನ್ನು ಕೆಲಸದಿಂದ ತೆಗೆಸಿದ್ದರು. ಇದೇ ದ್ವೇಷ ಇಟ್ಟುಕೊಂಡಿದ್ದ ಪ್ರವೀಣ್ ರಾಮಕೃಷ್ಣಗೌಡ ಅವರ ಮನೆಗೆ ಬಂದು ಅವರ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಹೆಚ್ಚಿನ ಮಾಹಿತಿಗೆ ಈ ಸುದ್ದಿಯನ್ನೂ ಓದಿ; ಮೈಸೂರು: ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ