ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಪಕ್ಕದ ಮನೆ ಗೋಡೆ ಕುಸಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ. ನಿಪ್ಪಾಣಿ ನಗರದ ತಿರುಪತಿ ಹತ್ಕರ (45) ಮೃತರು.
ಮೃತ ವ್ಯಕ್ತಿ ತಗಡಿನ ಶೆಡ್ನಲ್ಲಿ ವಾಸವಿದ್ದರು. ಶನಿವಾರ ತಡರಾತ್ರಿ ಪಕ್ಕದ ಮನೆ ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇನ್ನುಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನಿಪ್ಪಾಣಿ ತಹಶೀಲ್ದಾರ್ ಹಾಗೂ ಚಿಕ್ಕೋಡಿ ಉಪವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಬಸವೇಶ್ವರ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತದಲ್ಲಿ ಮತ್ತೋರ್ವ ನಾಪತ್ತೆ; ಪೊಲೀಸರಿಗೆ ದೂರು ನೀಡಿದ ಯುವಕನ ತಾಯಿ - Shiruru Hill Collapse
ಹಾವೇರಿಯಲ್ಲಿ ಯುವತಿಗೆ ಗಾಯ: ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ತಾಲೂಕಿನ ಬರಡಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಯುವತಿಯ ಮೈಮೇಲೆ ಬಿದ್ದಿದೆ. 18 ವರ್ಷದ ಹೊನ್ನವ್ವ ತಳವಾರ ಎಂಬ ಯುವತಿ ಗಂಭೀರ ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಬಳಿಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಹಾವೇರಿ ತಹಶೀಲ್ದಾರ್ ಶಂಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಜನರು ಹಾಳಾಗಿರುವ ಮನೆಗಳನ್ನು ಬಿಟ್ಟು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.