ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಅವಾಂತರಗಳು ಮುಂದುವರೆದಿವೆ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಕುಂಸಿ ಬಳಿಯ ರೈಲು ಹಳಿಯ ಮೇಲೆ ಬೃಹತ್ ಮರವೊಂದು ಬಿದ್ದು ರೈಲು ಸಂಚಾರ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪರಿಣಾಮ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ವ್ಯತ್ಯಯವಾಯಿತು. ಭಾರಿ ಗಾಳಿ ಮತ್ತು ಮಳೆಗೆ ಅರಸಾಳು ದಾಟಿ ಕುಂಸಿ ಬಳಿ ಬರುವಾಗ ಮರವು ಹಳಿಯ ಮೇಲೆ ಮುರಿದು ಬಿದ್ದಿತ್ತು. ಜೊತೆಗೆ ವಿದ್ಯುತ್ ತಂತಿಗಳು ಹರಿದು ಬಿದ್ದಿದ್ದವು.
ವಿಷಯ ತಿಳಿದು ಸಂಚರಿಸುತ್ತಿದ್ದ ರೈಲನ್ನು ಏಕಾಏಕಿ ನಿಲ್ಲಿಸಲಾಗಿತ್ತು. ರೈಲು ನಿಂತಿದ್ದನ್ನು ಕಂಡ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರ ಗುಂಪು, ರೈಲಿನಿಂದ ಇಳಿದು ಹಳಿ ಮೇಲೆ ಬಿದ್ದ ಮರವನ್ನು ತೆರವು ಮಾಡಿ ಮತ್ತೆ ಸಂಚರಿಸುವಂತೆ ಮಾಡಿದರು. ಪರಿಣಾಮ ರೈಲು ಸುಮಾರು 40 ನಿಮಿಷ ತಡವಾಗಿ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಆಗಮಿಸಿತ್ತು.
ಸುರಿಯುವ ಮಳೆಯನ್ನು ಲೆಕ್ಕಿಸದೇ, ಮರನ್ನು ತೆರವು ಮಾಡಿದ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಯುವಕರ ತಂಡ ಸಾಗರದಿಂದ ಬೆಂಗಳೂರಿಗೆ ಇಂಟಿರಿಯರ್ ಡೆಕೋರೇಷನ್ ಕೆಲಸದ ನಿಮಿತ್ತ ಹೊರಟಿತ್ತು. ತಮ್ಮ ಬಳಿ ಇರುವ ವಸ್ತುಗಳಿಂದ ಮರವನ್ನು ತೆರವು ಮಾಡಿದ್ದಕ್ಕೆ ರೈಲ್ವೆ ಇಲಾಖೆಯ ಸಿಬ್ಬಂದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ಡಿಬ್ರುಗಢ್ ಎಕ್ಸ್ಪ್ರೆಸ್ ರೈಲು: ಇಬ್ಬರು ಸಾವು, ಹಲವರಿಗೆ ಗಾಯ - Train accident