ಮಂಗಳೂರು: ಆಮೆಯ ತರ ಕೂರುವ ಕೂರ್ಮಾಸನ ಯೋಗವನ್ನು ದೀರ್ಘಾವಧಿ ಮಾಡಿ ಮಂಗಳೂರಿನ 13 ವರ್ಷದ ಬಾಲಕಿ ಸಾಧನೆ ಮಾಡಿದ್ದು, ಇಂಡಿಯಾ ಬುಕ್ ಅಫ್ ರೆಕಾರ್ಡ್ನಲ್ಲಿ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ದೇರೇಬೈಲ್‌ನ ನೆಕ್ಕಿಲಗುಡ್ಡೆ ನಿವಾಸಿ ಹರೀಶ್ ಶೆಟ್ಟಿಗಾರ್ ಮತ್ತು ಕವಿತಾ ಶೆಟ್ಟಿಗಾರ್ ಅವರ ಪುತ್ರಿ 13 ವರ್ಷದ ಮೇಘನಾ ಎಚ್. ಶೆಟ್ಟಿಗಾರ್ ಈ ಸಾಧನೆ ಮಾಡಿದವರು. ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲ್ನಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದ ಈ ಯುವ ಯೋಗ ತಾರೆ ದೊಡ್ಡ ಸಾಧನೆ ಕೂರ್ಮಾಸನವನ್ನು 1 ಗಂಟೆ 17 ಸೆಕೆಂಡುಗಳ ಕಾಲ ಮಾಡುವ ಮೂಲಕ "India Book of Records" ನಲ್ಲಿ ಅತಿ ಹೆಚ್ಚು ಸಮಯ ಕೂರ್ಮಾಸನ ನಡೆಸಿದ ಕಿರಿಯರಾಗಿ ದಾಖಲೆ ಬರೆದಿದ್ದಾರೆ.
ಮೇಘನಾ, ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲ್‌ನ ವಿದ್ಯಾರ್ಥಿನಿ, 1ನೇ ತರಗತಿಯಿಂದಲೇ ಯೋಗ ತರಗತಿಗಳಿಗೆ ಹಾಜರಾಗುತ್ತಿದ್ದಳು. 7ನೇ ತರಗತಿಗೆ ಬಂದಾಗಲೇ ಕೂರ್ಮಾಸನ ಮಾಡಲು ಪ್ರಯತ್ನಿಸುತ್ತಿದ್ದ ಈ ಬಾಲಕಿ, ಅವಳ ತಂದೆ ತಾಯಿಯ ಮತ್ತು ಯೋಗ ಶಿಕ್ಷಕಿ ಕವಿತಾ ಅಶೋಕ್ ಅವರ ಸಹಕಾರದಿಂದ ಈ ಆಸನವನ್ನು ದಾಖಲೆ ರೀತಿ ಮಾಡಲು ಸಾಧ್ಯವಾಗಿದೆ.
ಮಧ್ಯಪ್ರದೇಶದ ದಾಖಲೆ ಮುರಿದ ಮೇಘನಾ: 27 ಸೆಪ್ಟೆಂಬರ್ 2024 ರಂದು ಈ ದಾಖಲೆ ಮಾಡಲಾಗಿದ್ದು, 13 ವರ್ಷದ ಮೇಘನಾ, "Longest Duration to Hold Kurmasana by a Teen" ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ಇದುವರೆಗೆ, ಮಧ್ಯಪ್ರದೇಶದ ಸ್ನೇಹ ಎಂಬವರ 45 ನಿಮಿಷದ ಅತಿ ಉದ್ದದ ಕೂರ್ಮಾಸನದ ದಾಖಲೆ ಇತ್ತು. ಮೇಘನಾ ಇದನ್ನು ಮುರಿದು, 1 ಗಂಟೆ 17 ಸೆಕೆಂಡುಗಳ ಕಾಲ ಸ್ಥಿರವಾಗಿ ಕೂರ್ಮಾಸನದಲ್ಲಿ ಉಳಿದರು.
ಈ ಬಗ್ಗೆ ಮಾತನಾಡಿದ ಮೇಘನಾ ಶೆಟ್ಟಿಗಾರ್, "ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲ್‌ನ 8ನೇ ತರಗತಿಯಲ್ಲಿ ಕಲಿಯುತ್ತಿದ್ದೇನೆ. ನನ್ನ ಯೋಗ ಶಿಕ್ಷಕಿ ಕವಿತಾ ಅಶೋಕ್ ಅವರ ಮಾರ್ಗದರ್ಶನದಲ್ಲಿ ಈ ದಾಖಲೆ ಮಾಡಿದಿದ್ದೇನೆ. ಕೂರ್ಮಾಸನದಲ್ಲಿ 1 ಗಂಟೆ 17 ಸೆಕೆಂಡುಗಳ ಕಾಲ ಉಳಿದು ದಾಖಲೆ ಮಾಡಿರುವುದು ನನಗೆ ತುಂಬಾ ಖುಷಿಯಾಗುತ್ತಿದೆ. ಈ ಸಾಧನೆಗೆ ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ವಿಶೇಷವಾಗಿ ನನ್ನ ಶಿಕ್ಷಕಿ ಕವಿತಾ ಅಶೋಕ್, ನನ್ನ ತಂದೆ ಹರೀಶ್ ಶೆಟ್ಟಿಗಾರ್, ತಾಯಿ ಕವಿತಾ ಶೆಟ್ಟಿಗಾರ್, ಮತ್ತು ನನ್ನ ಶಾಲೆಯ ಶಿಕ್ಷಕರು ಉಜ್ವಲಾ ಸಿಸ್ಟರ್, ಪುಷ್ಪಾ ಸಿಸ್ಟರ್ ಅವರಿಗೆ ತುಂಬಾ ಧನ್ಯವಾದಗಳು. ಇದನ್ನು ಸಾಧಿಸಲು ನಿರಂತರ ಅಭ್ಯಾಸ ಮಾಡಿದೆ," ಎಂದು ಹೇಳಿದ್ದಾರೆ.
ಯೋಗ ಶಿಕ್ಷಕಿ ಕವಿತಾ ಅಶೋಕ್ ಮಾತನಾಡಿ "ಈ ಸಾಧನೆ ಮಾಡುವುದಕ್ಕೆ, ಸಣ್ಣ ವಯಸ್ಸಿನಿಂದಲೇ ಯೋಗವನ್ನು ಅಭ್ಯಾಸ ಮಾಡಬೇಕು. ಕುರ್ಮಾಸನದಂತಹ ಯೋಗವನ್ನು ಮಾಡಲು ತುಂಬಾ ಪರಿಶ್ರಮ ಬೇಕು" ಎಂದು ತಮ್ಮ ವಿದ್ಯಾರ್ಥಿನಿಯ ಸಾಧನೆಯನ್ನು ಪ್ರಶಂಸಿದರು.