ಹಾವೇರಿ: ಆಧುನಿಕತೆಯ ಜೀವನಶೈಲಿಗೆ ಮಾರುಹೋಗಿರುವ ಜನರು ಪಾಸ್ಟ್‌ಫುಡ್, ಪಾಸ್ಟ್‌ಫುಡ್ ಸೇವನೆಯಿಂದ ಹಲವು ರೋಗಗಳಿಗೆ ತುತ್ತಾಗುತ್ತಾರೆ. ಇದಕ್ಕೆಲ್ಲಾ ರಾಮಬಾಣ ಸಿರಿಧಾನ್ಯವಾಗಿದ್ದು, ನವಣಿ, ಸಾಮೆ, ಊದಲು, ಬರುಗು, ಹಾರಕ, ಕೊರಲು ಸೇರಿದಂತೆ ಹಲವು ಧಾನ್ಯಗಳಲ್ಲಿ ಪೌಷ್ಟಿಕಾಂಶ, ಫೈಬರ್ ಅಡಕವಾಗಿವೆ. ಇದೀಗ ಹಾವೇರಿ ತಾಲೂಕು ಸಂಗೂರು ಗ್ರಾಮದ ರೈತ ಚಂದ್ರಕಾಂತ ಸಂಗೂರು ಸಿರಿಧಾನ್ಯ ಬೆಳೆ ಬೆಳೆಯುವ ಸೈ ಎನಿಸಿಕೊಂಡಿದ್ದಾರೆ.
ರಾಸಾಯನಿಕ ಮುಕ್ತ ಬೆಳೆ; ಕಳೆದ 28 ವರ್ಷಗಳಿಂದ ಚಂದ್ರಕಾಂತ ಸಂಗೂರು ಸಾವಯವ ಬೇಸಾಯ ಮಾಡಿಕೊಂಡು ಬಂದಿದ್ದು, ಪ್ರಸ್ತುತ ಈ ಕೃಷಿ ಕೈಹಿಡಿದಿದೆ. ಎರಡೂವರೆ ದಶಕಗಳ ಹಿಂದೆ ಸಾವಯವವಾಗಿ ಬೆಳೆದ ತೊಗರಿಬೇಳೆಯನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಮಾರುತ್ತಿದ್ದರು. ರಾಸಾಯನಿಕ ಗೊಬ್ಬರ ಕ್ರಿಮಿನಾಶಕಗಳಿಲ್ಲದ ಸಿರಿಧಾನ್ಯ ಬೆಳೆ ಬೆಳೆಯಲು ಚಂದ್ರಕಾಂತಗೆ ಉತ್ತೇಜನ ಲಭಿಸಿತು. ಪರಿಣಾಮ ಚಂದ್ರಕಾಂತ ಇದೀಗ 1,500 ರೈತರಿಗೆ ಸಿರಿಧಾನ್ಯಗಳ ಬಿತ್ತನೆ ಬೀಜವನ್ನು ಉಚಿತವಾಗಿ ನೀಡುವದಲ್ಲದೆ, ಅವರು ಬೆಳೆದ ಸಿರಿಧಾನ್ಯಗಳನ್ನು ಖರೀದಿಸುತ್ತಿದ್ದಾರೆ. ಜೊತೆಗೆ ಈ ರೀತಿ ಖರೀದಿಸಿದ ಸಿರಿಧಾನ್ಯಗಳನ್ನ ಸಂಸ್ಕರಿಸಿ ದೇಶದ 22 ರಾಜ್ಯ, ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಹಾಗೂ ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ.
ಕೇವಲ ಸಿರಿಧಾನ್ಯಗಳನ್ನು ಬೆಳೆಯುವುದಲ್ಲದೆ ಅವುಗಳನ್ನು ಕೆಜಿ, ಅರ್ಧಕೆಜಿ, ಎರಡು ಕೆಜಿ ಪ್ಯಾಕೆಟ್ ಮಾಡಿ ಗ್ರಾಹಕರಿಗೆ ನೇರವಾಗಿ ಕೋರಿಯರ್ ಮೂಲಕ ತಲುಪಿಸುತ್ತಿದ್ದಾರೆ. ಇದರ ಜೊತೆಗೆ ಸಿರಿಧಾನ್ಯಗಳ ಹಿಟ್ಟು ರವಾ ಅನ್ನು ಸಹ ಮಾರಾಟ ಮಾಡುತ್ತಿದ್ದಾರೆ. ಇದಲ್ಲದೆ ಸಿರಿಧಾನ್ಯಗಳ ಶಾವಿಗೆ ನೂಡಲ್ಸ್, ಪಾಸ್ತಾ, ಅವಲಕ್ಕಿ ಸಿದ್ಧಪಡಿಸುತ್ತಿದ್ದಾರೆ. ಸಿರಿಧಾನ್ಯಗಳ ಬಿಸ್ಕಿಟ್‌ಗಳನ್ನು ಸಹ ಸಿದ್ಧಪಡಿಸಿ, ಮಾರಾಟ ಮಾಡುತ್ತಿದ್ದಾರೆ. ಆರಂಭದಲ್ಲಿ ಬೆಂಗಳೂರಿಗರ ಪ್ರೇರಣೆಯಿಂದ ಆರಂಭವಾದ ಈ ಸಿರಿಧಾನ್ಯ ಉದ್ಯಮವಾಗಿ ಬೆಳೆದಿದೆ. ವಾರ್ಷಿಕವಾಗಿ 2 ಕೋಟಿಗೂ ಅಧಿಕ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಡಕೆ ತೋಟದಲ್ಲಿ ಕಾಳುಮೆಣಸು ಬೆಳೆದು ಯಶಸ್ವಿಯಾದ ಹಾವೇರಿ ರೈತ - a farmer grew pepper
ರೈತರಿಗೆ ಉಚಿತ ಬಿತ್ತನೆ ಬೀಜ, ಕಂಪನಿಯಿಂದ ಉತ್ಪನ್ನ ಖರೀದಿ; ಆರಂಭದಲ್ಲಿ ಸಿರಿಧಾನ್ಯಗಳಿಂದ ಪ್ರೇರೇಪಿತರಾಗಿ ಸಿರಿಧಾನ್ಯ ಬೆಳೆಯಲು ಮುಂದಾದ ಚಂದ್ರಕಾಂತ ನಂತರ ಭೂಸಿರಿ ಮಿಲೆಟ್ಸ್ ಫಾರ್ಮರ್ಸ್ ಪ್ರೊಡುಸರ್ಸ್ ಕಂಪನಿ ಲಿಮಿಟೆಡ್ ಸ್ಥಾಪನೆ ಮಾಡಿ ಹಲವು ರೈತರಿಗೆ ಸಿರಿಧಾನ್ಯ ಬೆಳೆಯಲು ಪ್ರೇರೇಪಣೆ ನೀಡುತ್ತಿದ್ದಾರೆ. ಭೂಸಿರಿ ಕಂಪನಿಯಿಂದ ನೇರವಾಗಿ 3 ಸಾವಿರ ಗ್ರಾಹಕರಿಗೆ ಇವರ ಉತ್ಪನ್ನನಗಳು ತಲುಪುತ್ತಿವೆ. ಭೂಸಿರಿ ಕಂಪನಿಯಲ್ಲಿ ಆರು ಜನ ಡೈರೆಕ್ಟರ್ಸ್ ಇದ್ದಾರೆ. 500 ಜನ ಷೇರುದಾರರಿದ್ದಾರೆ. ಇದಲ್ಲದೇ 1,500 ಕ್ಕಿಂತ ಅಧಿಕ ರೈತರಿಗೆ ಈ ಕಂಪನಿ ಉಚಿತ ಸಿರಿಧಾನ್ಯ ಬಿತ್ತನೆ ಬೀಜ ನೀಡುತ್ತಿದೆ. ಪ್ರತಿ ಎಕರೆಗೆ ಮೂರು ಕೆಜಿಯಂತೆ ಕಂಪನಿ ರೈತರಿಗೆ ಬಿತ್ತನೆ ಬೀಜ ನೀಡುತ್ತಿದೆ. ಈ ರೀತಿ ಬಿತ್ತನೆ ಬೀಜ ಪಡೆದ ರೈತರು ತಮ್ಮ ಜಮೀನಿನಲ್ಲಿ ಸಿರಿಧಾನ್ಯ ಬೆಳೆಯಬೇಕು. ಇದಕ್ಕೆ ಯಾವುದೇ ರಸಾಯನಿಕ ಗೊಬ್ಬರ ಕ್ರಿಮಿನಾಶಕ ಬಳಿಸುವಂತಿಲ್ಲ. ಒಂದು ವೇಳೆ ಬಳಸಿರುವುದು ಕಂಡು ಬಂದರೆ ಅವರ ಹತ್ತಿರ ಭೂಸಿರಿ ಕಂಪನಿ ಸಿರಿಧಾನ್ಯ ಖರೀದಿಸುವದಿಲ್ಲ.
ಇದನ್ನೂ ಓದಿ: ಬಹು ಬೆಳೆ ಬೇಸಾಯದಿಂದ ಹಾವೇರಿ ರೈತನಿಗೆ ಲಕ್ಷ ಲಕ್ಷ ಆದಾಯ - Multi Cropping
ಸಾವಯವವಾಗಿ ಬೆಳೆದ ಸಿರಿಧಾನ್ಯಗಳನ್ನು ಭೂಸಿರಿ ರೈತರ ಜಮೀನುಗಳಲ್ಲಿಯೇ ಖರೀದಿ ಮಾಡುತ್ತದೆ. ಜೊತೆಗೆ ಅಂದಿನ ದರ ನೀಡುವ ಮೂಲಕ ರೈತರನ್ನು ಪ್ರೋತ್ಸಾಹಿಸುತ್ತಿದೆ. ಇದಾದ ನಂತರ ರೈತರು ಬೆಳೆದ ಸಿರಿಧಾನ್ಯಗಳನ್ನು ಸಂಸ್ಕರಿಸಿ ವೈಜ್ಞಾನಿಕ ಸಂಗ್ರಹಾಲಯಗಳಲ್ಲಿ ಶೇಖರಿಸಲಾಗುತ್ತದೆ. 30 ಕೆಜಿ ತೂಕದ ಚೀಲಗಳಲ್ಲಿ ಸಂಗ್ರಹಿಸಿದ ನಂತರ ಬೇಡಿಕೆಗೆ ಅನುಗುಣವಾಗಿ ಪ್ಯಾಕ್ ಮಾಡಲಾಗುತ್ತದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಿರಿಧಾನ್ಯಗಳನ್ನು ಪ್ಯಾಕ್ ಮಾಡಿ ಕೋರಿಯರ್ ಮೂಲಕ ತಲುಪಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಭೂಸಿರಿಯಿಂದ ಉತ್ಪನ್ನ ಖರೀದಿಸುವವರ ಸಂಖ್ಯೆ ಅಧಿಕವಾಗುತ್ತಿದೆ.
ಮನೆಯ ಜಾನುವಾರುಗಳ ಸಾಕಣೆ, ದೇಸಿ ಗೊಬ್ಬರ ಬಳಕೆ: ಜೊತೆಗೆ ಬಿತ್ತನೆ ಬೀಜ ಪಡೆಯುವ ರೈತರ ಸಂಖ್ಯೆ ಸಹ ಅಧಿಕವಾಗಿದೆ. ಭಾರತ ಸರ್ಕಾರ ಸಿದ್ಧಪಡಿಸಿದ ಒಎನ್ಡಿಸಿ ಅಪ್ಲಿಕೇಶನ್ನಲ್ಲಿ ಸ್ಥಾನ ಪಡೆದಿರುವ ಭೂಸಿರಿ ಉತ್ಪನ್ನಗಳನ್ನು ಅಮೆಜಾನ್ ಫ್ಲಿಪ್ಕಾರ್ಟ್ ಅಪ್ಲಿಕೇಶನ್ಗಳ ಮೂಲಕ ಖರೀದಿಸುತ್ತಾರೆ. ಕೇವಲ ಸಾವಿರಾರು ರೂಪಾಯಿ ವಹಿವಾಟು ನಡೆಸುತ್ತಿದ್ದ ಭೂಸಿರಿ ಇದೀಗ ವರ್ಷಕ್ಕೆ ಎರಡು ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದೆ. ಚಂದ್ರಶೇಖರ ತಮ್ಮ ಮನೆಯಲ್ಲಿ 93 ಜಾನುವಾರುಗಳನ್ನು ಸಾಕಿದ್ದು, ಅದರ ಎಲ್ಲ ಗಂಜಲ ಮತ್ತು ಸೆಗಣಿಯನ್ನು ತಮ್ಮ ಜಮೀನುಗಳಿಗೆ ಬಳಕೆ ಮಾಡುತ್ತಿದ್ದಾರೆ.