ಬೆಳಗಾವಿ: ಒಂದೇ ಬೆಳೆಗೆ ಅಂಟಿಕೊಂಡು ಕೂರುವ ರೈತರ ನಡುವೆ, ಇಲ್ಲೊಂದು ರೈತ ಕುಟುಂಬ ಮಿಶ್ರ ಬೆಳೆ ಬೆಳೆದು ಆರ್ಥಿಕ ಅಭಿವೃದ್ಧಿ ಕಾಣುತ್ತಿದೆ. ಅಲ್ಲದೇ ಕೃಷಿಯಲ್ಲಿ ಖುಷಿ ಕಾಣಬಹುದು ಎಂಬುದನ್ನು ಸಾಧಿಸಿ ತೋರಿಸಿದೆ. ಇವರ ಶಿಸ್ತಿನ ಕೃಷಿ ಕಾಯಕ ಇತರರಿಗೂ ಮಾದರಿಯಾಗಿದೆ.
ಹೌದು, ಕಬ್ಬಿನ ಬೆಳೆ, ಕಬ್ಬಿನ ನಡುವೆ ಕ್ಯಾಬೇಜ್, ಬೀನ್ಸ್, ಕೊತ್ತಂಬರಿ, ಮೆಂತ್ಯೆ, ಮೂಲಂಗಿ, ನವಲಕೋಲ್, ಮೆಣಸಿನಕಾಯಿ, ಬೆಂಡಿಕಾಯಿ.. ಹೀಗೆ ಆರೇಳು ಬೆಳೆಗಳನ್ನು ಸಮೃದ್ಧವಾಗಿ ಬೆಳೆದವರು ಬೆಳಗಾವಿ ತಾಲೂಕಿನ ದೇವಗಿರಿ ಗ್ರಾಮದ ಕವಿತಾ- ಬಾಬು ಚೌಗುಲೆ ದಂಪತಿ. ತಮ್ಮ 5 ಎಕರೆ ಜಮೀನು ಪೈಕಿ 2 ಎಕರೆಯಲ್ಲಿ ಈ ರೀತಿ ಮಿಶ್ರ ಬೆಳೆ ಪ್ರಯೋಗಿಸಿ ಸೈ ಯಶಸ್ವಿಯಾಗಿದ್ದಾರೆ.
ಸಾಮಾನ್ಯವಾಗಿ ರೈತರು ಕಬ್ಬಿನ ಬೆಳೆ ನಡುವೆ ಬೇರೆ ಬೆಳೆ ಬೆಳೆಯುವುದು ವಿರಳ. ಆದರೆ, ರೈತ ಬಾಬು ಚೌಗುಲೆ ಅವರು ಕಬ್ಬಿನ ಸಾಲುಗಳ ನಡುವಿನ ಜಾಗ ಬಳಸಿಕೊಂಡು. ಈ ರೀತಿ ತರಕಾರಿ ಬೆಳೆದಿದ್ದಾರೆ. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಇವರು, ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿದ್ದಾರೆ. ಬೋರ್ವೆಲ್ ಮತ್ತು ಬಾವಿ ಮೂಲಕ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬಾಬು ಚೌಗುಲೆ ಅವರಿಗೆ ಪತ್ನಿ ಕವಿತಾ ಮತ್ತು ಪುತ್ರ ಲಖನ್ ಕೂಡ ಸಾಥ್ ಕೊಟ್ಟಿದ್ದು, ಮೂವರು ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹೈನುಗಾರಿಕೆಯನ್ನೂ ಮಾಡ್ತಿರೋ ಚೌಗುಲೆ ಕುಟುಂಬ, ತಮ್ಮ ಹೊಲದ ಬದುವಿನಲ್ಲಿ ಪಪ್ಪಾಯಿ, ತೆಂಗಿನ ಮರಗಳನ್ನು ಸಹ ಬೆಳೆದಿದೆ. ಇನ್ನುಳಿದ ಮೂರು ಎಕರೆಯಲ್ಲಿ ಕಬ್ಬು, ಕ್ಯಾಬೇಜ್ ಸೇರಿ ಮತ್ತಿತರ ಬೆಳೆ ಬೆಳೆದಿದ್ದಾರೆ. ಒಟ್ಟಾರೆ ಜಮೀನಿನಲ್ಲಿ ಸ್ವಲ್ಪವೂ ಜಾಗ ವ್ಯರ್ಥ ಆಗದಂತೆ ಬೆಳೆ ಬೆಳೆದು ವರ್ಷಕ್ಕೆ 8 ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿದ ರೈತ ಬಾಬು ಚೌಗುಲೆ, ಕಳೆದ 25 ವರ್ಷಗಳಿಂದ ಕೃಷಿ ಮಾಡುತ್ತಿದ್ದೇವೆ. ಇತ್ತೀಚೆಗೆ ಮಿಶ್ರ ಬೆಳೆ ಬೆಳೆಯುತ್ತಿದ್ದೇವೆ. ತುಂಬಾ ಚೆನ್ನಾಗಿ ಬೆಳೆ ಬಂದಿವೆ. ಯಾರೂ ಕೂಡ ಕೃಷಿಯಿಂದ ವಿಮುಖರಾಗಬಾರದು. ಇದರಲ್ಲೇ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ನಮ್ಮ ಮಗ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿ. ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ನಮ್ಮ ಜೊತೆ ದುಡಿಯುತ್ತಿದ್ದಾನೆ ಎಂದು ಹೇಳಿದರು.
ಕವಿತಾ ಚೌಗುಲೆ ಮಾತನಾಡಿ, ಕೈ ಕೆಸರಾದರೆ ಬಾಯಿ ಮೊಸರು ಎನ್ನುವಂತೆ ಹೊಲದಲ್ಲಿ ಕಷ್ಟ ಪಟ್ಟು ದುಡಿದು ನಾವು ತುಂಬಾ ಆರಾಮಾಗಿದ್ದೇವೆ. ವರ್ಷದ 12 ತಿಂಗಳು ಕೆಲಸ ಮಾಡುತ್ತೇವೆ. ಕೃಷಿಯಿಂದ ಏನೂ ಆಗೋದಿಲ್ಲ ಅಂತಾ ಎಲ್ಲರೂ ಹೇಳುತ್ತಾರೆ. ಆದರೆ, ಅವರ ಹೊಲದಲ್ಲಿ ಅವರೇ ದುಡಿದರೆ ಕೃಷಿಯಲ್ಲಿ ಎಲ್ಲರೂ ಉತ್ತಮ ಲಾಭ ಗಳಿಸಬಹುದು. ಇನ್ನು ರಾಸಾಯನಿಕ ಗೊಬ್ಬರ, ಔಷಧಿ ಬಳಸೋದರಿಂದ ನಮ್ಮ ಭೂಮಿ ಮೇಲೆ ದುಷ್ಪರಿಣಾಮವಾಗಿ ವಿಷವನ್ನೇ ತಿನ್ನಬೇಕಾಗುತ್ತೆ. ಹಾಗಾಗಿ, ನಮ್ಮ ಹೊಲಕ್ಕೆ ನಾವು ಸೆಗಣಿ ಗೊಬ್ಬರ, ಜೀವಾಮೃತವನ್ನೆ ಬಳಸುತ್ತೇವೆ ಎಂದರು.
ಒಟ್ಟಿನಲ್ಲಿ ಕೃಷಿಯಲ್ಲಿ ಜೀವನ ಇಲ್ಲ ಎನ್ನುವವರಿಗೆ ಕೃಷಿಯಿಂದಲೇ ಜೀವನ ಎಂಬುದನ್ನು ನಿರೂಪಿಸಿರುವ ಈ ರೈತ ಕುಟುಂಬದ ಕೃಷಿ ಕಾಯಕ ಎಲ್ಲರಿಗೂ ಮಾದರಿಯೇ ಸರಿ.
ಇದನ್ನೂ ಓದಿ: ನಾಲ್ಕು ಎಕರೆಯಲ್ಲಿ 40 ಕ್ವಿಂಟಾಲ್ ಬೆಳ್ಳುಳ್ಳಿ; ಬರದಲ್ಲೂ ಬಂಗಾರದ ಬೆಳೆ ಪಡೆದ ಹಾವೇರಿಯ ಸಾವಯವ ಕೃಷಿಕರು