ಮೈಸೂರು: ತುಂಡಾಗಿ ಬಿದಿದ್ದ ವಿದ್ಯುತ್ ತಂತಿ ತುಳಿದು, ರೈತ ಹಾಗೂ ಎರಡು ಜಾನುವಾರುಗಳು ಸಾವನ್ನಪ್ಪಿರುವ ದಾರುಣ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ರೈತ ಹೆಚ್.ಡಿ. ಕೋಟೆ ತಾಲೂಕಿನ ಮೊತ್ತ ಗ್ರಾಮದ ಶೇಖರ್ (45) ಎಂದು ಗುರುತಿಸಲಾಗಿದೆ.
ಗುರುವಾರ ಸಂಜೆ ತಮ್ಮ ಜಮೀನಲ್ಲಿ 4 ರಾಸುಗಳನ್ನು ಮೇಯಿಸಿಕೊಂಡು ಬರಲು ಶೇಖರ್ ಹೋಗಿದ್ದರು. ವಾಪಸ್ ಮನೆಗೆ ಬರುವಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎರಡು ರಾಸು ಮತ್ತು ಶೇಖರ್ ಸಾವನ್ನಪ್ಪಿದ್ದಾರೆ. ಇನ್ನುಳಿದ ಎರಡು ರಾಸುಗಳು ಮನೆಗೆ ಬಂದಾಗ ಅನುಮಾನಗೊಂಡ ಶೇಖರ್ ಅವರ ಅಣ್ಣ ಮಹೇಶ್ ಜಮೀನಿನ ಬಳಿ ತೆರಳಿ ನೋಡಿದಾಗ ಸ್ಥಳದಲ್ಲಿ ಶೇಖರ್ ಹಾಗೂ ಎರಡು ರಾಸುಗಳು ಸಾವನ್ನಪ್ಪಿರುವುದನ್ನು ಕಂಡಿದ್ದಾರೆ.
ತಕ್ಷಣ ಬೆಸ್ಕಾಂ ಇಲಾಖೆಗೆ ಕರೆ ಮಾಡಿದಾಗ ಸ್ವೀಕರಿಸುವುದಿಲ್ಲ. ನಂತರ ಪೊಲೀಸ್ ಇಲಾಖೆಗೆ ಕರೆ ಮಾಡಿದಾಗ ಸ್ಥಳಕ್ಕೆ ಆಗಮಿಸಿದ ಅಂತರಸಂತೆ ಪೊಲೀಸರು ತುಂಡಾಗಿ ಬಿದಿದ್ದ ವಿದ್ಯುತ್ ತಂತಿಗಳಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಬಳಿಕ ಮೃತ ಶೇಖರ್ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಇಂದು ಕುಟುಂಬದವರಿಗೆ ನೀಡಿದ್ದಾರೆ.
ಈ ಸಂಬಂಧ ಬೆಸ್ಕಾಂ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಅಂತರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮೈಸೂರಲ್ಲಿ ಹಿಟ್ ಅಂಡ್ ರನ್ಗೆ ಮಹಿಳೆ ಬಲಿ: ಐವರಿಗೆ ಗಂಭೀರ ಗಾಯ