ತುಮಕೂರು: ಮತದಾನದ ಬಗ್ಗೆ ಜಾಗೃತಿ ಮೂಡಿಸಲು ವೈದ್ಯರೊಬ್ಬರು ಕುದುರೆ ಏರಿ ಮತಗಟ್ಟೆ ಬಂದು ಮತಹಕ್ಕು ಚಲಾಯಿಸಿದರು. ತುಮಕೂರು ಜಿಲ್ಲೆ ತಿಪಟೂರು ಪಟ್ಟಣದ ಮತಗಟ್ಟೆ ಸಂಖ್ಯೆ 82 ರಲ್ಲಿ ಕುದುರೆ ಏರಿ ಬಂದು ವೈದ್ಯ ಡಾ.ಶ್ರೀಧರ್ ಮತದಾನ ಮಾಡಿದರು. ಈ ಮೂಲಕ ಗಮನ ಸೆಳೆದರು.
ಸತ್ಯಕುಮಾರ್ ಫೌಡೇಂಶನ್ ಮೂಲಕ ಸಮಾಜ ಸೇವೆ ಮಾಡುತ್ತಿರುವ ವೈದ್ಯ ಡಾ.ಶ್ರೀಧರ್ ಕುದುರೆ ಮೇಲೆ ಮತಗಟ್ಟೆಗೆ ಬಂದು ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮತದಾರರಿಗೆ ಉಚಿತವಾಗಿ ಸಮೋಸಾ ಮತ್ತು ಟೀ ವಿತರಿಸಿದರು. ಈ ಮೂಲಕ ವಿನೂತನ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಿದರು. 'ಮತದಾನ ಪ್ರತಿಯೊಬ್ಬರ ಕರ್ತವ್ಯ, ಎಲ್ಲರೂ ಮತಹಕ್ಕು ಚಲಾಯಿಸಬೇಕು' ಎಂದು ಕರೆ ನೀಡಿದರು.
ನವ ದಂಪತಿ ಮತದಾನ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಬಂದು ನವ ದಂಪತಿ ಮತ ಚಲಾಯಿಸಿದರು. ಹಸೆಮಣೆ ಏರಿದ ನಂತರ ಮದುವೆ ಉಡುಪಿನಲ್ಲೇ ಮತದಾನ ಮಾಡಲು ಮತಗಟ್ಟೆಗೆ ನವಜೋಡಿ ಆಗಮಿಸಿದ್ದು ವಿಶೇಷ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಟಿ.ಎನ್ ಬೆಟ್ಟದ ನವ ದಂಪತಿಗಳಾದ ಲಕ್ಷ್ಮೀಪತಿ ಪಿ.ಹೆಚ್ ಮತ್ತು ನವ್ಯಶ್ರೀ ಮದುವೆ ದಿನವೇ ಮತದಾನ ಮಾಡಿ ಮಾದರಿಯಾದರು. ಸರತಿ ಸಾಲಿನಲ್ಲಿ ನಿಂತು ಮತ ಹಕ್ಕು ಚಲಾವಣೆ ಮಾಡಿದ ನವ ದಂಪತಿಗಳ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ 'ಯಾರೊಬ್ಬರು ಮತದಾನದಿಂದ ದೂರ ಉಳಿಯದಿರಿ. ಮತದಾನ ಎಲ್ಲಎ ಹಕ್ಕು' ಎಂದು ಸಂದೇಶ ಸಾರಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಒಂದೇ ಕುಟುಂಬದ 85ಕ್ಕೂ ಹೆಚ್ಚು ಮಂದಿಯಿಂದ ಏಕಕಾಲಕ್ಕೆ ಮತದಾನ - Lok Sabha Election
ತುಮಕೂರಲ್ಲಿ 77.70 ಪ್ರತಿಶತ ವೋಟಿಂಗ್: ಎರಡನೇ ಹಂತದಲ್ಲಿ ಕರ್ನಾಟಕದ ಹಳೆ ಮೈಸೂರು, ಬೆಂಗಳೂರು, ತುಮಕೂರು ಸೇರಿ 14 ಲೋಕಸಭೆ ಕ್ಷೇತ್ರದಲ್ಲಿ ಶುಕ್ರವಾರ ಮತದಾನ ನಡೆಯಿತು. ರಾಜ್ಯಾದ್ಯಂತ ಶೇ69.23ರಷ್ಟು ಮತದಾನ ದಾಖಲಾಗಿದೆ. ತುಮಕೂರು ಕ್ಷೇತ್ರದಲ್ಲಿ ಶೇ.77.70 ರಷ್ಟು ಮತದಾನವಾಗಿದೆ. ರಾಜಧಾನಿ ಬೆಂಗಳೂರಿನ ಲೋಕಸಭಾ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ.
ಉಡುಪಿ-ಚಿಕ್ಕಮಗಳೂರು ಶೇ.76.06, ಹಾಸನ ಶೇ. 77.51, ದಕ್ಷಿಣ ಕನ್ನಡ ಶೇ.77.43, ಚಿತ್ರದುರ್ಗ ಶೇ.73.11, ಮಂಡ್ಯ ಶೇ.81.48, ಮೈಸೂರು ಶೇ. 70.45, ಚಾಮರಾಜನಗರ ಶೇ.76.59, ಬೆಂಗಳೂರು ಗ್ರಾಮಾಂತರ ಶೇ.67.29, ಬೆಂಗಳೂರು ಉತ್ತರ ಶೇ.54.42, ಬೆಂಗಳೂರು ಕೇಂದ್ರ ಶೇ. 52.81, ಬೆಂಗಳೂರು ದಕ್ಷಿಣ ಶೇ.53.15, ಚಿಕ್ಕಬಳ್ಳಾಪುರ ಶೇ.76.82 ಹಾಗೂ ಕೋಲಾರ ಕ್ಷೇತ್ರದಲ್ಲಿ ಶೇ.78.07 ರಷ್ಟು ಮತಗಳು ದಾಖಲಾಗಿವೆ.
ಶುಕ್ರವಾರ ನಡೆದ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಕರ್ನಾಟಕ ಅಷ್ಟೇ ಅಲ್ಲದೇ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ನಡೆದಿದ್ದು, ಒಟ್ಟಾರೆ ಶೇ.63ರಷ್ಟು ಮತದಾನವಾಗಿದೆ.