ಧಾರವಾಡ: ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದೆಲ್ಲೆಡೆ ಬರಗಾಲ ಆವರಿಸಿದೆ. ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗ ಪ್ರಗತಿಪರ ರೈತನೋರ್ವ ಬರಗಾಲದ ಮಧ್ಯೆಯೂ ಪರ್ಪಲ್ ಗೋಧಿ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಇವರು ವಿದೇಶ ತಳಿಯ ಗೋಧಿ ಬೆಳೆದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಹೌದು, ಧಾರವಾಡ ತಾಲೂಕಿನ ಕಣವಿ ಹೊನ್ನಾಪುರ ಗ್ರಾಮದ ಬಸನಗೌಡ ಪಾಟೀಲ ಎಂಬುವರ ಜಮೀನಿನಲ್ಲಿ ಬೆಳೆದ ಅಪರೂಪದ ಗೋಧಿ ಬೆಳೆ ಇದಾಗಿದೆ. ಈ ತಳಿಯ ಮೂಲ ಪೂರ್ವ ಆಫ್ರಿಕಾದ್ದು ಎಂದು ಹೇಳಲಾಗಿದೆ. ಬೇರೆ ಬೇರೆ ಬೆಳೆಗಳನ್ನು ಬೆಳೆಯೋಣ ಎಂದು ಇವರ ಪರಿಚಯದ ತಳಿ ತಜ್ಞರೊಬ್ಬರು ಇವರಿಗೆ ಸಲಹೆ ನೀಡಿದ್ದರಂತೆ. ಅದಕ್ಕೆ ಒಪ್ಪಿಕೊಂಡು, 20 ಗುಂಟೆಯಲ್ಲಿ ಈ ಗೋಧಿ ಬಿತ್ತನೆ ಮಾಡಿದ್ದರು ರೈತ ಬಸನಗೌಡ ಪಾಟೀಲ. ‘ಈ ಸಲ ಬೋರವೆಲ್ನಲ್ಲಿಯೂ ನೀರಿಲ್ಲ. ಮಳೆಯೂ ಆಗಿಲ್ಲ. ಆದರೆ ಕಡಿಮೆ ನೀರಿನಲ್ಲಿ ಗೋಧಿ ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿದೆ’ ಎಂದು ರೈತ ಬಸನಗೌಡ ಪಾಟೀಲ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಬಸನಗೌಡ ರೈತನಿಗೆ ಇಂತಹ ಒಂದು ತಳಿ ಬೆಳೆಯೋಣ ಅನ್ನೋ ಹುಮ್ಮಸ್ಸು ನೀಡಿ, ಈ ವಿಶೇಷ ಗೋಧಿಯ ತಳಿ ಸಹ ತಂದುಕೊಟ್ಟವರು ಮೃತ್ಯುಂಜಯ ವಸ್ತ್ರದ ಎಂಬುವರು. ವೃತ್ತಿಯಿಂದ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಮತ್ತು ವಕೀಲರಾಗಿರುವ ಇವರು ಗೋಧಿ ಮತ್ತು ಜೋಳದ ವಿಶೇಷ ತಳಿಗಳನ್ನು ತರಿಸಿಕೊಂಡು ಬೇರೆ ಬೇರೆ ರೈತರ ಜಮೀನಿನಲ್ಲಿ ಬೆಳೆಯುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ.
ಮೊಹಾಲಿಯಿಂದ ಈ ಪರ್ಪಲ್ ಗೋಧಿಯನ್ನು ತರಿಸಿದ ಮೃತ್ಯುಂಜಯ ವಸ್ತ್ರದ, ಬಸನಗೌಡರನ್ನು ಒಪ್ಪಿಸಿ, 20 ಗುಂಟೆಯಲ್ಲಿ ಐದು ಕೆಜಿ ಬಿತ್ತನೆ ಮಾಡಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಸ್ವಲ್ಪ ತಡವಾಗಿಯೇ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿದ ಬಳಿಕ ಮಳೆ ಕೈಕೊಟ್ಟಿದ್ದರಿಂದ ಇವರಿಗೆ ಈ ಗೋಧಿ ಬೆಳೆಯುತ್ತೋ.. ಇಲ್ಲವೋ.. ಅನ್ನೋ ಆತಂಕವೂ ಇತ್ತು. ಜೊತೆಗೆ ಬೋರವೆಲ್ ನೀರು ಸಹ ಕಡಿಮೆಯಾಗಿತ್ತು. ಆದರೆ ಕಡಿಮೆ ನೀರಿನಲ್ಲಿಯೇ ಈ ಪರ್ಪಲ್ ಗೋಧಿ ಈಗ ಇಳುವರಿ ನಿರೀಕ್ಷೆ ಮೂಡಿಸಿದೆ.
ಸದ್ಯ ಅರ್ಧ ಎಕರೆಯಲ್ಲಿ ಇದನ್ನು ಬೆಳೆದಿರುವ ಇವರು ಈ ಗೋಧಿ ಆರೋಗ್ಯಕ್ಕೆ ಕೂಡಾ ಒಳ್ಳೆಯದು ಎಂದು ಹೇಳುತ್ತಾರೆ. ಈ ಪರ್ಪಲ್ ಗೋಧಿಗೆ ಮಾರುಕಟ್ಟೆಯಲ್ಲಿ ಒಳ್ಳೆ ಬೇಡಿಕೆಯೂ ಇದೆ. ಹೀಗಾಗಿಯೇ ಇದನ್ನು ಈ ಭಾಗದಲ್ಲಿ ಬೆಳೆಯುವ ಸಾಹಸಕ್ಕೆ ಕೈ ಹಾಕಿರುವ ಈ ಇಬ್ಬರ ಪ್ರಯತ್ನಕ್ಕೆ ಈಗ ಒಳ್ಳೆ ಯಶಸ್ಸು ಸಿಕ್ಕಿದಡೆ. ಅಲ್ಲದೆ, ಬರಗಾಲದಲ್ಲಿಯೂ ಬೆಳೆದು ನಿಂತಿರುವ ಗೋಧಿಯನ್ನು ನೋಡೋದಕ್ಕೆ ಅಕ್ಕಪಕ್ಕದ ರೈತರು ಬಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಬರಗಾಲದಲ್ಲೂ ಹುಲುಸಾಗಿ ಗೋಧಿ ಬೆಳೆದು ಹೊಸ ಭರವಸೆ ಮೂಡಿಸಿದ್ದಾರೆ ಈ ರೈತರು.
ಓದಿ: ದೆಹಲಿ ಮದ್ಯ ಹಗರಣ: ಬಿಆರ್‌ಎಸ್ ನಾಯಕಿ ಕವಿತಾ ಬಂಧಿಸಿ ದೆಹಲಿಗೆ ಕರೆತಂದ ಇ.ಡಿ