ಉಳ್ಳಾಲ: ಉಳ್ಳಾಲದಿಂದ ಮೀನುಗಾರಿಕೆಗೆ ತೆರಳಿ ವಾಪಾಸ್ ಆಗುತ್ತಿದ್ದ ಟ್ರಾಲ್ಬೋಟೊಂದು ಶುಕ್ರವಾರ ನಸುಕಿನ ಜಾವ ಸಮುದ್ರದಲ್ಲಿನ ಬಂಡೆಯೊಂದಕ್ಕೆ ಬಡಿದು ಮುಳುಗಿದ್ದು, ಸ್ಥಳೀಯ ಮೀನುಗಾರರು ಬೋಟ್‍ನಲ್ಲಿದ್ದ ಐವರನ್ನು ರಕ್ಷಿಸಿದ್ದಾರೆ. ಮುಳುಗಡೆಯಾಗಿರುವ ಬೋಟ್‍ನಲ್ಲಿ ಹಿಡಿದಿಟ್ಟ ಮೀನುಗಳು, ಬಲೆ ಸಮುದ್ರದ ಪಾಲಾಗಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ಉಳ್ಳಾಲ ನಿವಾಸಿ ನಯನಾ ಪಿ.ಸುವರ್ಣ ಅವರಿಗೆ ಸೇರಿದ 'ನವಾಮಿ - ಶಿವಾನಿ' ಬೋಟ್ ದುರಂತಕ್ಕೀಡಾಗಿದ್ದು, ಬೋಟ್ ಚಲಾಯಿಸುತ್ತಿದ್ದ ನಯನಾ ಅವರ ಪತಿ ಪ್ರವೀಣ್ ಸುವರ್ಣ, ಉತ್ತರ ಪ್ರದೇಶದ ಮೀನುಗಾರರಾದ ಸಮರ ಬಹದ್ದೂರ್, ರಾಮ್ ಮನೋಜ್, ರೋಹಿತ್, ಪ್ರಕಾಶ್, ವಾಸು ಈ ಐವರಲ್ಲಿ ಮೂವರನ್ನು ನಾಡದೋಣಿಯಲ್ಲಿ ಆಗಮಿಸಿದ ರಾಮ ಸುವರ್ಣ ಮತ್ತು ವಯತೀಶ್ ಸುವರ್ಣ ರಕ್ಷಿಸಿದ್ದಾರೆ. ಉಳಿದ ಇಬ್ಬರನ್ನು ಮತ್ತು ಬೋಟನ್ನು ಪ್ರಕಾಶ್ ಖಾರ್ವಿ ಮಾಲೀಕತ್ವದ ದುರ್ಗಾ ಲಕ್ಷ್ಮಿ ಮತ್ತು ಮನೋಜ್ ಖಾರ್ವಿ ಮಾಲೀಕತ್ವದ ಶ್ರೀಗೌರಿ ಬೋಟ್‍ನ ಮೀನುಗಾರರು ರಕ್ಷಿಸಿದ್ದಾರೆ.
ಘಟನೆಯ ವಿವರ: ಗುರುವಾರ ಸಂಜೆ ಪ್ರವೀಣ್ ಸುವರ್ಣ ಸೇರಿದಂತೆ ಉತ್ತರ ಪ್ರದೇಶದ ಐವರು ಮೀನುಗಾರಿಕೆಗೆ ತೆರಳಿದ್ದರು. ಇಂದು ನಸುಕಿನ ಜಾವ ನಾಲ್ಕು ಗಂಟೆಗೆ ಮೀನುಗಾರಿಕೆ ಮುಗಿಸಿ ಉಳ್ಳಾಲ ಸಮುದ್ರ ತೀರದ ಮೂಲಕ ಕಿನಾರೆಗೆ ಆಗಮಿಸುತ್ತಿದ್ದರು. ಈ ವೇಳೆ, ಬೋಟ್‍ನ ಪ್ರೊಫೈಲರ್ಗೆ ಸಮುದ್ರದಲ್ಲಿದ್ದ ಯಾವುದೋ ವಸ್ತುವೊಂದು ತಾಗಿ ಪ್ರೊಫೈಲರ್ ಹಾಳಾಗಿದೆ. ಬೆಳಗಿನ ಜಾವ ಸಮುದ್ರದ ಇಳಿತದಿಂದ ಅಲ್ಲೆ ನಿಂತಿದ್ದ ಬೋಟ್ ತೆರೆಗಳ ಹೊಡೆತಕ್ಕೆ ಕಡಲ್ಕೊರೆತದ ಶಾಶ್ವತ ಕಾಮಗಾರಿಯಾದ ರೀಫ್ ಬಳಿ ಹಾಕಿದ್ದ ಸರ್ವೇಕಲ್ಲಿಗೆ ಡಿಕ್ಕಿ ಹೊಡೆದು ಮುಳುಗಲು ಆರಂಭಿಸಿದೆ.
ಹಡಗು ಮುಳುಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಮೀನುಗಾರಿಕೆಗೆ ತೆರಳಿದ್ದ ದುರ್ಗಾಲಕ್ಷ್ಮೀ ಮತ್ತು ಶ್ರೀ ಗೌರಿ ಬೋಟ್‍ನ ಮೀನುಗಾರರು ಐವರನ್ನು ರಕ್ಷಿಣೆ ಮಾಡಿದ್ದಾರೆ. ಮುಳುಗುತ್ತಿದ್ದ ಬೋಟನ್ನು ಸಮುದ್ರದ ಕಿನಾರೆಗೆ ಕೊಂಡೊಯ್ಯಲು ಹಗ್ಗ ಕಟ್ಟಿ ಸ್ವಲ್ಪ ದೂರ ಎಳೆದುಕೊಂಡು ಬಂದಿದ್ದಾರೆ. ಈ ವೇಳೆ ಹಗ್ಗ ತುಂಡಾಗಿದೆ. ಬಳಿಕ ಮತ್ತೊಂದು ಬೋಟ್‍ನ ಸಹಾಯದಿಂದ ಮುಳುಗುತ್ತಿದ್ದ ಹಡುಗನ್ನು ಕಿನಾರೆಗೆ ಎಳೆದೊಯ್ಯಲಾಗಿದೆ. ಸದ್ಯ ಐವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಹಿಂದೆ ಕೂಡು ಇಂತಹದ್ದೇ ಘಟನೆ ನಡೆದಿತ್ತು. ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಭಟ್ಕಳ ಬಂದರು ಸಮೀಪ ಕೋಟೆಗುಡ್ಡದ ಬಳಿ ಮುಳುಗಡೆಯಾಗಿತ್ತು. ಬೋಟ್‍ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿತ್ತು. ಸಿಹಾನ್ ಫಿಶರೀಸ್ ಎಂಬ ಬೋಟ್ ಮುಳುಗಡೆಯಾಗಿತ್ತು.
ಇದನ್ನೂ ಓದಿ: ಮುಳುಗುತ್ತಿದ್ದ ಬೋಟ್ನಿಂದ 30 ಮೀನುಗಾರರ ರಕ್ಷಣೆ: ಹಿಡಿದ ಮೀನು ಸಮುದ್ರಕ್ಕೆ!