ಚಾಮರಾಜನಗರ: ಹುಲಿ ದಾಳಿ ನಡೆಸಿದ ಪರಿಣಾಮ ಆನೆ ಮರಿ ನಡುರಸ್ತೆಯಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ ನಡೆದಿದೆ. ಬಂಡೀಪುರ-ಊಟಿ ರಾಷ್ಟ್ರೀಯ ಹೆದ್ದಾರಿ ಬದಿಯ ಮರಿಯಾನೆ ಮೇಯುತ್ತಿದ್ದ ಸಂದರ್ಭದಲ್ಲಿ ಹುಲಿ ಏಕಾಏಕಿ ದಾಳಿ ನಡೆಸಿ ಕೊಂದುಹಾಕಿದೆ. ಕೂಗಳತೆ ದೂರದಲ್ಲಿದ್ದ ತಾಯಿಯಾನೆ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಹುಲಿ ಓಡಿ ಹೋಗಿತ್ತು ಎಂದು ತಿಳಿದುಬಂದಿದೆ.
ಮರಿಯಾನೆ ಕಳೇಬರದ ಮುಂದೆ ನಿಂತು ತಾಯಿಯಾನೆ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಇದರಿಂದ ಬಂಡೀಪುರ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳ ಸವಾರರು ತಾಯಿಯಾನೆ ದಾಳಿ ಮಾಡಬಹುದು ಎಂಬ ಆಂತಕದಲ್ಲಿ ಸಂಚಾರ ಮಾಡದೆ ನಿಂತಲ್ಲೇ ನಿಂತಿದ್ದರು. ಹೀಗಾಗಿ ಸ್ಥಳದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿದ್ದು, ಸುಮಾರು ಒಂದು ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಮೃತ ಕಾಡಾನೆ ಮರಿಯ ಶವವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇನ್ನಷ್ಟೇ ಮೃತ ಮರಿಯ ಮರಣೋತ್ತರ ಪರೀಕ್ಷೆ ನಡೆಯಬೇಕಿದೆ. ಮರಿಯಾನೆಗೆ 3 ತಿಂಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಓದಿ: ವಿಶ್ವ ಸೃಜನಶೀಲತೆ ಮತ್ತು ನಾವೀನ್ಯತೆ ದಿನದ ಮಹತ್ವ ತಿಳಿಯಿರಿ - World creativity and Innovation Day