ಬೆಂಗಳೂರು: ಬಹುನಿರೀಕ್ಷಿತ TCS World-10K ಮ್ಯಾರಥಾನ್‌ಗೆ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದೆ. ನಾಳೆ ನಡೆಯಲಿರುವ ಈ ಮ್ಯಾರಥಾನ್‌ನಲ್ಲಿ ವಿವಿಧ ಕ್ಷೇತ್ರಗಳ ಸಾವಿರಾರು ಓಟಗಾರರು ಭಾಗವಹಿಸಲಿದ್ದಾರೆ. ಈ ಪೈಕಿ 96 ವರ್ಷ ವಯಸ್ಸಿನ ಹಿರಿಯ ಓಟಗಾರ ಎನ್.ಎಸ್.ದತ್ತಾತ್ರೇಯ ಗಮನ ಸೆಳೆಯುತ್ತಿದ್ದಾರೆ. 2019ರ ಜನವರಿಯಲ್ಲಿ ತಮ್ಮ ದೂರದ ಓಟದ ಪ್ರಯಾಣವನ್ನು ಪ್ರಾರಂಭಿಸಿದ್ದ ದತ್ತಾತ್ರೇಯ ಇದುವರೆಗೂ ಸಾಕಷ್ಟು ಮ್ಯಾರಥಾನ್‌ಗಳು ಮತ್ತು ವಾಕಥಾನ್‌ಗಳಲ್ಲಿ ಭಾಗಿಯಾಗಿದ್ದಾರೆ.
ತಮ್ಮ ಸಾಹಸದ ಕುರಿತು ಇತ್ತೀಚೆಗೆ ಮಾತನಾಡಿದ ದತ್ತಾತ್ರೇಯ, ಮೊದಲ ಬಾರಿ ಮ್ಯಾರಥಾನ್ ಓಡಿದ ನಂತರ, ನಾನು ಇದನ್ನು ಮುಂದುವರಿಸಲು ಬಯಸುತ್ತೇನೆ ಎಂಬುದು ನನಗೆ ತಿಳಿದಿತ್ತು. ಓಟದ ಅಭ್ಯಾಸ ಕೇವಲ ಫಿಟ್ ಆಗಿರಬೇಕೆಂಬ ಬಯಕೆಯಿಂದ ಪ್ರಾರಂಭವಾಯಿತು. ಆದರೆ ಶೀಘ್ರದಲ್ಲೇ ಅದು ಜೀವನಶೈಲಿಯಾಗಿ ಮಾರ್ಪಟ್ಟಿತು. ನೀವು ಅಂದುಕೊಂಡದ್ದನ್ನು ಎಂಜಾಯ್ ಮಾಡಲು ಸಾಧ್ಯವಾಗದಿದ್ದರೆ ಬಹಳಷ್ಟು ಹಣ ಗಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗಾಗಿ ಆರೋಗ್ಯ ಮತ್ತು ಜೀವನಶೈಲಿಯ ಬಗ್ಗೆ ಗಮನ ಹರಿಸಬೇಕಾದದ್ದು ಅಗತ್ಯ. ನಿಮ್ಮನ್ನು ಭೇಟಿಯಾಗುವ ಸ್ನೇಹಿತರು ಮೊದಲು ಕೇಳುವುದು ನಿಮ್ಮ ಆರೋಗ್ಯದ ಬಗ್ಗೆಯೇ ಹೊರತು ನಿಮ್ಮಲ್ಲಿರುವ ಹಣದ ಬಗ್ಗೆ ಅಲ್ಲ ಎಂದರು.
ನಿಮ್ಮ ದೈನಂದಿನ ಚಟುವಟಿಕೆಗಳೇನು?: ಪ್ರತಿದಿನ ಬೆಳಿಗ್ಗೆ 5:30ಕ್ಕೆ ಎದ್ದೇಳುವ ನಾನು, ಸ್ವಲ್ಪ ಲಘು ವ್ಯಾಯಾಮ ಮತ್ತು ವಾರ್ಮ್ ಅಪ್ ಅಭ್ಯಾಸಗಳನ್ನು ಮಾಡುತ್ತೇನೆ. ಬಳಿಕ ಸುಮಾರು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಸೈಕಲ್ ಸವಾರಿ ಮಾಡುತ್ತೇನೆ. ಸಂಜೆ, ನಾನು ಇತ್ತೀಚೆಗೆ ಖರೀದಿಸಿದ ಟ್ರೆಡ್‌ಮಿಲ್‌ನಲ್ಲಿ ಸ್ವಲ್ಪ ಸಮಯ ಕಳೆಯುತ್ತೇನೆ. ಈ ಸಂದರ್ಭದಲ್ಲಿ ಕೆಲಸ ಮುಗಿಸಿ ಬರುವ ನನ್ನ ಮಗ ಮುರಳಿ ನನ್ನೊಂದಿಗೆ ಸೇರಿಕೊಳ್ಳುತ್ತಾನೆ ಎಂದು ತಿಳಿಸಿದರು.
ವರ್ಚುವಲ್ ಪ್ರಪಂಚವು ನಿಧಾನವಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಈ ಯುಗದಲ್ಲಿ, ಕುಟುಂಬಕ್ಕೆ ಹೊರೆಯಾಗದಂತೆ ಕೆಲವು ರೀತಿಯ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಗುಣಮಟ್ಟದ ಶಿಕ್ಷಣ ಹಾಗೂ ದೈಹಿಕ ವ್ಯಾಯಾಮದ ಮೂಲಕ ಕುಟುಂಬಕ್ಕೆ ಹೊರೆಯಾಗದಂತೆ ಆರೋಗ್ಯಕರವಾಗಿರುವಂತೆ ಮಕ್ಕಳನ್ನ ರೂಪಿಸುವುದು, ಪೋಷಕರು ತಮ್ಮ ಮಕ್ಕಳಿಗೆ ನೀಡಬಹುದಾದ ಎರಡು ಉತ್ತಮ ವಿಷಯಗಳು. TCS World - 10K ಮ್ಯಾರಥಾನ್ ಬೆಂಗಳೂರಿನ ನಂ.1 ದೂರದ ಓಟದ ಸ್ಪರ್ಧೆ. ಬಹಳಷ್ಟು ಜನರನ್ನು ಒಟ್ಟಿಗೆ ತರುವ ಮೂಲಕ ಆರೋಗ್ಯವೇ ಸಂಪತ್ತು ಎಂಬ ಸಂದೇಶ ಸಾರುತ್ತದೆ. ಕಳೆದ ಕೆಲವು ವರ್ಷಗಳಿಂದ ಇದರ ಭಾಗವಾಗಿರುವುದಕ್ಕೆ ನನಗೆ ಸಂಪೂರ್ಣ ಸಂತೋಷವಿದೆ ಎಂದು ಹೇಳಿದರು.