ಹುಬ್ಬಳ್ಳಿ: ಲೋಹಿಯಾನಗರದ ನಿವಾಸಿ ಆಕಾಶ ಮಠಪತಿ ಅನುಮಾನಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಎಂಟು ಮಂದಿಯನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆಕಾಶ ಅವರ ತಂದೆ ಶೇಖರಯ್ಯ ಮಠಪತಿ ಅವರು 12 ಮಂದಿ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕಾಶ ಮೇಲೆ ಹಲ್ಲೆ ನಡೆಸಿರುವುದಾಗಿ ಅವರಲ್ಲಿ ಒಬ್ಬ ತಿಳಿಸಿದ್ದ. ಈ ಹೇಳಿಕೆ ಆಧರಿಸಿ ಪೊಲೀಸರು ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದರು.
ಆಕಾಶ ಪತ್ನಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧವೂ ದೂರು ದಾಖಲಾಗಿದ್ದು, ಅವರನ್ನು ಸಹ ವಿಚಾರಣೆ ನಡೆಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ವ್ಯಕ್ತಿ ಹೇಗೆ ಮೃತಪಟ್ಟಿದ್ದಾನೆ ಎಂದು ದೃಢೀಕರಿಸುವುದಕ್ಕೆ ವಿಸ್ರಾ ವರದಿ ಎನ್ನುತ್ತಾರೆ. ಆ ನಿಟ್ಟಿನಲ್ಲಿ ಆಕಾಶ ಅವರ ದೇಹದ ಪ್ರಮುಖ ಭಾಗಗಳಾದ ಹೃದಯ, ಮೂತ್ರಪಿಂಡ, ಲಿವರ್, ಕರುಳು ಇತ್ಯಾದಿಗಳ ವಿಶ್ಲೇಷಣೆ ಮತ್ತು ವರದಿಗಾಗಿ ಬೆಂಗಳೂರಿನ ಎಫ್‌ಎಸ್‌ಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 15 ದಿನಗಳಲ್ಲಿ ವರದಿ ಕೈ ಸೇರುವ ಸಾಧ್ಯತೆ ಇದೆ. ಆಗ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಕಾಶ ಮಠಪತಿ ಕೊಲೆ ಪ್ರಕರಣ: ಸೂಕ್ತ ತನಿಖೆಗೆ ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹ - Akash Mathapati murder Case