ಶಿವಮೊಗ್ಗ: ಜೂ.8 ರಿಂದ ಇಲ್ಲಿಯವರೆಗೆ 15 ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ 61 ಎನ್ಡಿಪಿಎಸ್ (ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ) ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದರು. ಇಂದು ಡಿಎಆರ್ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 61 ಪ್ರಕರಣಗಳ ಪೈಕಿ 7 ಕಳ್ಳ ಸಾಗಣೆ, ಇನ್ನುಳಿದ 54 ಗಾಂಜಾ ಸೇವನೆ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.
ಇದುವರೆಗೂ 15.363 ಕೆ.ಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದೇವೆ. ತೀರ್ಥಹಳ್ಳಿಯಲ್ಲಿ ಗಾಂಜಾ ಬೆಳೆದ ಬಗ್ಗೆ ಒಂದು ಪ್ರಕರಣ ಇದೆ. ಇನ್ನುಳಿದ ಪ್ರಕರಣಗಳಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡಲು ತೆಗೆದುಕೊಂಡು ಬಂದಿರುತ್ತಾರೆ. ಪ್ರಕರಣಗಳಲ್ಲಿ ಕೆಲ ಹೊಸ ಮತ್ತು ಹಳೆಯ ಆರೋಪಿಗಳು ಇದ್ದಾರೆ. ಅವರೆಲ್ಲರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೇವೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಏರಿಯಾ ಡಾಮಿನೇಷನ್ ಮಾಡುತ್ತಿದ್ದೇವೆ. ಅಡ್ಡೆಗಳು, ಟೀ ಅಂಗಡಿ ಮತ್ತು ನಿರ್ಜನ ಪ್ರದೇಶಗಳಲ್ಲಿ ರಾತ್ರಿ 11ರ ಮೇಲೆ ಇರುವ ಯುವಕರ ವಿರುದ್ಧ ಪಿಟಿಕೇಸ್ ಹಾಕಿ, ಗಾಂಜಾ ಸೇವನೆಯ ಬಗ್ಗೆ ಪರೀಕ್ಷೆಗೆ ಒಳಪಡಿಸಿದ್ದೇವೆ ಎಂದು ತಿಳಿಸಿದರು.
ಸುಮಾರು 450 ಯುವಕರನ್ನು ಪರೀಕ್ಷೆಗೆ ಒಳಪಡಿಸಿದಾಗ 54 ಯುವಕರಲ್ಲಿ ಗಾಂಜಾ ಪಾಸಿಟಿವ್ ಬಂದಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತ ಗಾಂಜಾ ಸೇವನೆ, ಮಾರಾಟ ಮಾಡುತ್ತಿರುವುದು ಕಂಡುಬಂದರೆ ಪೊಲೀಸರಿಗೆ ಗಮನಕ್ಕೆ ತನ್ನಿ. ನಮ್ಮ ಇಲಾಖೆ ಗಾಂಜಾ ಮಾರಾಟದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.