ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧದ ಜಾತಿನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ 590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಗುತ್ತಿಗೆದಾರ ವೇಲು ನಾಯ್ಕರ್ ನೀಡಿದ್ದ ದೂರಿನನ್ವಯ ಸೆಪ್ಟೆಂಬರ್ 13ರಂದು ಮುನಿರತ್ನ ಅವರ ವಿರುದ್ಧ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನ ಸಿಐಡಿಯ ವಿಶೇಷ ತನಿಖಾ ತಂಡಕ್ಕೆ ವರ್ಗಾವಣೆಗೊಳಿಸಿ ಆದೇಶಿಸಿತ್ತು. ಪ್ರಕರಣದ ತನಿಖೆ ನಡೆಸಿದ ಸಿಐಡಿಯ ಎಸ್ಐಟಿ ತಂಡ ಒಟ್ಟು 53 ಸಾಕ್ಷಿಗಳನ್ನು ವಿಚಾರಣೆ ನಡೆಸಿ ಮುನಿರತ್ನ ಅವರ ವಿರುದ್ಧ 157 ದಾಖಲೆಗಳನ್ನೊಳಗೊಡ 590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.
ಆ ಪೈಕಿ ಮೂವರು ಪ್ರತ್ಯಕ್ಷದರ್ಶಿ ಸಾಕ್ಷಿದಾರರು ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ನೀಡಿದ್ದಾರೆ. ಜಾತಿನಿಂದನೆ ಮಾಡಿರುವ ಬಗ್ಗೆ ದೂರುದಾರ ವೇಲು ನಾಯ್ಕರ್ ಸಲ್ಲಿಸಿದ್ದ ಆಡಿಯೋ ಕ್ಲಿಪ್ ಹಾಗೂ ಮುನಿರತ್ನ ಅವರ ಧ್ವನಿ ಮಾದರಿಯನ್ನು ಎಫ್ಎಸ್ಎಲ್‌ಗೆ ರವಾನಿಸಿ ತಜ್ಞರಿಂದ ವರದಿ ಪಡೆಯಲಾಗಿದೆ. ಆರೋಪಿಯ ಧ್ವನಿ ಮಾದರಿ ಹಾಗೂ ಫೋನ್ ಸಂಭಾಷಣೆ ಕ್ಲಿಪ್ನಲ್ಲಿರುವ ಧ್ವನಿಗೆ ಹೋಲಿಕೆಯಾಗಿರುವುದು ಎಫ್ಎಸ್ಎಲ್ ತಜ್ಞರ ವರದಿಯಿಂದ ದೃಢಪಟ್ಟಿದೆ.
ಆದ್ದರಿಂದ ಸಂಗ್ರಹಿಸಿದ ಎಲ್ಲ ದಾಖಲೆಗಳು, ಸಾಕ್ಷಿದಾರರ ಹೇಳಿಕೆಗಳು ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳಿಂದ ಮುನಿರತ್ನ ಅವರು ಜಾತಿನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಬಗ್ಗೆ ಮತ್ತು ಜಾತಿ ಜಾತಿಗಳ ನಡುವೆ ವೈಷಮ್ಯವನ್ನುಂಟು ಮಾಡಿರುವ ಬಗ್ಗೆ ಆರೋಪ ಸಾಬೀತಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಐಡಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಮತ್ತೊಂದು ಎಫ್ಐಆರ್ ದಾಖಲು: ಹತ್ಯೆ ಯತ್ನ, ಸುಪಾರಿ ನೀಡಿದ ಆರೋಪದಡಿ ಶಾಸಕ ಮುನಿರತ್ನ ಅವರ ವಿರುದ್ಧ ಇದೀಗ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಮಾಜಿ ಕಾರ್ಪೊರೇಟರ್ ಮಂಜುಳಾ ಅವರ ಪತಿ ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮುನಿರತ್ನ ಸೇರಿದಂತೆ ಕೆಲವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಖಚಿತ, ಪಕ್ಷದ ಒಳ - ಹೊರಗಿನ ಶತ್ರುಗಳ ಸಂಹಾರಕ್ಕೆ ಚಾಮುಂಡಿಗೆ ಪೂಜೆ: ಬಿ.ಸಿ.ಪಾಟೀಲ್