ಬೆಳಗಾವಿ : ಸಾಮಾನ್ಯವಾಗಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ಅಬ್ಬಬ್ಬಾ ಎಂದರೆ 50ಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧಿಸಿರೋದನ್ನು ಎಲ್ಲರೂ ಕೇಳಿರುತ್ತಿರಿ. ಆದರೆ, ಈ ಕ್ಷೇತ್ರದಲ್ಲಿ ಒಮ್ಮೆ 301, ಮತ್ತೊಮ್ಮೆ ಬರೊಬ್ಬರಿ 456 ಅಭ್ಯರ್ಥಿಗಳು ಕಣಕ್ಕೆ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದ್ದರು.
ಹೌದು, ದೇಶದ ಗಮನ ಸೆಳೆದ ಬೆಳಗಾವಿಯ ಎರಡು ಮಹತ್ವದ ಚುನಾವಣೆಗಳು ಮತದಾರರಿಗೆ ಗುರುತಿನ ಚೀಟಿ, ಠೇವಣಿ ಹಣ ಹೆಚ್ಚಳಕ್ಕೆ ಕಾರಣವಾಗಿದ್ದವು. 1985, 1996ರ ಚುನಾವಣೆ ನಡೆಸೋದೆ ಆಯೋಗಕ್ಕೆ ದೊಡ್ಡ ಸವಾಲು ಆಗಿತ್ತು. ಆದರೂ ಈ ಸವಾಲನ್ನು ಆಯೋಗ ಯಶಸ್ವಿಯಾಗಿ ನೆರವೇರಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು.
ಬೆಳಗಾವಿ ವಿಧಾನಸಭೆ ಚುನಾವಣೆಗಳಲ್ಲಿ ಎಂಇಎಸ್ ಗೆಲುವಿನ ಬಗ್ಗೆ ಅಪಸ್ವರ ಮೊದಲಿನಿಂದಲೂ ಇತ್ತು. ಹಾಗಾಗಿ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಕನ್ನಡ ಹೋರಾಟಗಾರರು ಹಲವು ಬಾರಿ ಮನವಿ ಮಾಡುತ್ತಲೇ ಬಂದಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆ ವಿಭಿನ್ನ ಹೋರಾಟಕ್ಕೆ ಯೋಜನೆ ರೂಪಿಸಿದ ಹೋರಾಟಗಾರರು 1985ರಲ್ಲಿ ಬೆಳಗಾವಿ ವಿಧಾನಸಸಭೆ ಚುನಾವಣೆಯಲ್ಲಿ 301 ಜನ ಅಭ್ಯರ್ಥಿಗಳು ಸ್ಪರ್ಧಿಸುವಂತೆ ಮಾಡಿದ್ದರು. ಆಗ ಕನ್ನಡ ಪರ ಹೋರಾಟಗಾರರು, ಅವರ ಕುಟುಂಬಸ್ಥರು, ಪತ್ರಿಕೆಗಳ ಸಂಪಾದಕರು, ಪತ್ರಕರ್ತರು ಸೇರಿ ಮನೆ ಮಂದಿಯಲ್ಲಾ ಚುನಾವಣೆ ಕಣಕ್ಕೆ ಇಳಿದಿದ್ದರು. ಹಾಗಾಗಿ, ಚಿಹ್ನೆ ಹಂಚಿಕೆ, ಮತಪತ್ರ ಮುದ್ರಣವೇ ಆಯೋಗಕ್ಕೆ ಸವಾಲು ಆಗಿತ್ತು. ಬೆಳಗಾವಿ ವಿಧಾನಸಭೆ ಚುನಾವಣೆ ಆಗ ಇಡೀ ದೇಶದ ಗಮನ ಸೆಳೆದಿತ್ತು. ಎರಡು ತಿಂಗಳ ಬಳಿಕ ಚುನಾವಣೆ ನಡೆದು ಕೊನೆಗೆ ಎಂಇಎಸ್ ಬೆಂಬಲಿತ ಅಭ್ಯರ್ಥಿ ಆರ್.ಎಸ್. ಮಾನೆ ಗೆದ್ದು ದಾಖಲೆ ನಿರ್ಮಿಸಿದ್ದರು.
1985ರಲ್ಲಿ ಕನ್ನಡಿಗರು ಮಾಡಿದ್ದ ಈ ವಿಭಿನ್ನ ಪ್ರಯೋಗವನ್ನು 1996ರಲ್ಲಿ ಎಂಇಎಸ್ ಕಾರ್ಯರೂಪಕ್ಕೆ ತಂದಿತ್ತು. ಈ ಚುನಾವಣೆಯಲ್ಲಿ ಒಟ್ಟು 456 ಜನ ಕಣಕ್ಕೆ ಇಳಿದಿದ್ದರು. ಈ ಚುನಾವಣೆಯೂ ಆಯೋಗಕ್ಕೆ ದೊಡ್ಡ ಮಟ್ಟದ ತಲೆನೋವು ಆಗಿತ್ತು. ಮತಪತ್ರ ಮುದ್ರಣ ಹಾಗೂ ಚುನಾವಣೆ ನಡೆಸಲು ಆಯೋಗಕ್ಕೆ ಸವಾಲಾಗಿತ್ತು. ಎರಡು ತಿಂಗಳ ಕಾಲ ಚುನಾವಣೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಜನತಾ ದಳದಿಂದ ಶಿವಾನಂದ ಕೌಜಲಗಿ, ಬಿಜೆಪಿಯಿಂದ ಬಾಬಾಗೌಡ ಪಾಟೀಲ್, ಕಾಂಗ್ರೆಸ್ ನಿಂದ ಪ್ರಭಾಕರ ಕೋರೆ ಕಣಕ್ಕೆ ಇಳಿದಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಜನತಾ ದಳದ ಶಿವಾನಂದ ಕೌಜಲಗಿ ಗೆದ್ದಿದ್ದರು.
452 ಮಂದಿ ಎಂಇಎಸ್ ಅಭ್ಯರ್ಥಿಗಳೇ : ಕಾಂಗ್ರೆಸ್, ಬಿಜೆಪಿ, ಜನತಾದಳ ಹಾಗೂ ಕೆಸಿಪಿ ಪಕ್ಷಗಳಿಂದ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಇನ್ನುಳಿದ 452 ಅಭ್ಯರ್ಥಿಗಳು ಎಂಇಎಸ್ ನವರೇ ಚುನಾವಣಾ ಕಣಕ್ಕೆ ಧುಮುಕಿದ್ದು ವಿಶೇಷವಾಗಿತ್ತು. ಆದರೆ, ಎಂಇಎಸ್ನ ಯಾವೊಬ್ಬ ಅಭ್ಯರ್ಥಿಗಳು ಗೆಲ್ಲಲಿಲ್ಲ. ಮತದಾರರು ತಮಗೆ ಯಾರಿಗೆ ಹಾಕಬೇಕೋ ಅವರಿಗೆ ಹಾಕಿ ಗೆಲ್ಲಿಸಿದ್ದು, ಬೆಳಗಾವಿ ಜಿಲ್ಲೆಯ ಕನ್ನಡ ಮತದಾರರ ಜಾಣತನಕ್ಕೆ ಸಾಕ್ಷಿಯಾಗಿತ್ತು.
ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಈಟಿವಿ ಭಾರತ ಜೊತೆ ಮಾತನಾಡಿ, ಆ ಎರಡೂ ಚುನಾವಣೆಗಳು ರಾಜಕೀಯ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದವು. ಚುನಾವಣಾ ಆಯೋಗ ಬಹಳ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿತ್ತು. ನಾಲ್ಕೈದು ಪುಟಗಳ ಬ್ಯಾಲೆಟ್ ಪೇಪರ್ ಇದ್ದರೂ ಕೂಡ ಮತದಾರರು ಜಾಣ್ಮೆಯಿಂದ ಮತ ಚಲಾಯಿಸಿದ್ದರು ಎಂದು ನೆನಪಿಸಿಕೊಂಡರು.
ಆ ವೇಳೆ ಕರ್ನಾಟಕದಲ್ಲಿ ಜನತಾ ದಳ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಗ ದೇಶದಲ್ಲಿ ಹೆಚ್. ಡಿ. ದೇವೇಗೌಡ ಅವರು ಪ್ರಧಾನಿ ಆಗಿದ್ದರು. ಬೆಳಗಾವಿ ಲೋಕಸಭೆಯಿಂದ ಸತತವಾಗಿ ನಾಲ್ಕು ಸಲ ಗೆದ್ದಿದ್ದ ಎಸ್.ಬಿ. ಸಿದ್ನಾಳ್ ಅವರಿಗೆ ಟಿಕೆಟ್ ಕೈತಪ್ಪಿತ್ತು. ಈ ಚುನಾವಣೆಯಲ್ಲಿ ಮೊದಲ ಸಲ ಬೆಳಗಾವಿಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಪ್ರಭಾಕರ ಕೋರೆ ಕಣಕ್ಕೆ ಇಳಿದಿದ್ದರು. ದೇಶದಲ್ಲಿ ಚುನಾವಣೆ ಮುಗಿದು ವಾಜಪೇಯಿ ಸರ್ಕಾರ ಪತನಗೊಂಡು, ದೇವೇಗೌಡರು ಪ್ರಧಾನಿಯಾದ ಬಳಿಕ ಬೆಳಗಾವಿ ಕ್ಷೇತ್ರದ ಮತದಾನ ನಡೆದಿತ್ತು. ಇದರಿಂದ ಜನತಾ ದಳದ ಅಭ್ಯರ್ಥಿ ಶಿವಾನಂದ ಕೌಜಲಗಿ ಆಯ್ಕೆಯಾದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಾಬಾಗೌಡ ಪಾಟೀಲ್ ಸೋತಿದ್ದರು.
ಇದನ್ನೂ ಓದಿ : ಬೆಳಗಾವಿ, ಚಿಕ್ಕೋಡಿಯಲ್ಲಿ ಸಚಿವರ ಮಕ್ಕಳಿಗೆ ಮಣೆ: ಬಿಜೆಪಿ ಹಿರಿಯರ ವಿರುದ್ಧ ಅಖಾಡಕ್ಕೆ ಧುಮುಕಿದ ಕಿರಿಯರು - Lok Sabha Election