ವಿಜಯಪುರ: ಬಿಸಿಲನಾಡೆಂದೇ ಹೆಸರಾಗಿರುವ ವಿಜಯಪುರದಲ್ಲಿ ತಾಪಮಾನ ವಿಪರೀತ ಹೆಚ್ಚಳವಾಗಿದೆ. ಇಂದು ಬೆಳ್ಳಂಬೆಳಿಗ್ಗೆಯೇ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮಧ್ಯಾಹ್ನದ ವೇಳೆಗೆ 44 ಡಿಗ್ರಿ ತಲುಪುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ. ಬಿಸಿಲ ಝಳಕ್ಕೆ ಜನರು ಮನೆಯಿಂದ ಹೊರಬರಲು ಸಾಧ್ಯವಾಗದೇ ನಾಳೆ ಲೋಕಸಭೆ ಚುನಾವಣೆಗೆ ಮತದಾನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯೂ ಗೋಚರಿಸಿದೆ.
ವಿಜಯಪುರ ಎಸ್ಸಿ ಮೀಸಲು ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 19,46,090 ಮತದಾರರಿದ್ದಾರೆ. ಈ ಪೈಕಿ ಪುರುಷ 9,87974, ಮಹಿಳೆ 9,57,906 ಹಾಗೂ 210 ಇತರೆ ಮತದಾರರಿದ್ದಾರೆ. 85 ವರ್ಷ ಮೇಲ್ಪಟ್ಟ 2,357 ಮತದಾರರ ಪೈಕಿ 2,170 ಜನರು ಮತದಾನದ ಹಕ್ಕು ಹೊಂದಿದ್ದಾರೆ. ಒಟ್ಟು 886 ದಿವ್ಯಾಂಗರ ಪೈಕಿ 854 ಮಂದಿ ಮತ ಹಾಕಲಿದ್ದಾರೆ.
2,086 ಮತಗಟ್ಟೆಗಳ ಸ್ಥಾಪನೆ: ಪ್ರತಿ ವಿಧಾನಸಭಾವಾರು ಕ್ಷೇತ್ರದಲ್ಲಿ 05 ಸಖಿ ಮತಗಟ್ಟೆ, 08 ದಿವ್ಯಾಂಗ ಮತಗಟ್ಟೆ, 08 ಯುವ ಮತಗಟ್ಟೆ, 08 ಧ್ಯೇಯ ಮತಗಟ್ಟೆ ಸ್ಥಾಪಿಸಲಾಗಿದೆ. 171 ಸೂಕ್ಷ್ಮ ಮತಗಟ್ಟೆ ಹಾಗೂ 46 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್‌ವರ್ ಹಾಗೂ ವೆಬ್ ಕಾಸ್ಟಿಂಗ್ ಮೂಲಕ ವಿಶೇಷ ನಿಗಾ ಇಡಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ರ್ಯಾಂಪ್, ಕುಡಿಯುವ ನೀರು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ, ವಿಶ್ರಾಂತಿ ಕೊಠಡಿ, ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸೇರಿದಂತೆ ಸಕಲ ಸಿದ್ಧತೆಯಾಗಿದೆ.
ಮತದಾನ ಬಹಿಷ್ಕಾರ ಎಚ್ಚರಿಕೆ: ಟೈಯರ್ ಫ್ಯಾಕ್ಟರಿ ಸ್ಥಳಾಂತರಕ್ಕೆ ಆಗ್ರಹಿಸಿ ಮತದಾನ ನಡೆಯಲಿರುವ ಶಾಲೆಯ ಗೇಟ್ ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಫ್ಯಾಕ್ಟರಿ ಸ್ಥಳಾಂತರಿಸದಿದ್ದರೆ ಚುನಾವಣೆಗೆ ಬಹಿಷ್ಕಾರ ಹಾಕುವುದಾಗಿ ಚುನಾವಣಾ ಅಧಿಕಾರಿಗಳಿಗೆ ಈ ಮೊದಲು ಮದಭಾವಿ ತಾಂಡಾ ನಿವಾಸಿಗಳು ಮನವಿ ಸಲ್ಲಿಸಿದ್ದರು. ಆದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಲ್ಲಿನ ಮತಗಟ್ಟೆಯ ಗೇಟ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಯಚೂರು: ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ - Lok Sabha Election