ಮೈಸೂರು: ಇಂದು ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ವಿವಿಧ ಪುಪ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಜೊತೆಗೆ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ನಾಗಲಕ್ಷ್ಮೀ ಅಲಂಕಾರ ಮಾಡಿರುವುದು ವಿಶೇಷವಾಗಿತ್ತು. ಇಂದು ಮಹಾರಾಜರ ಹೆಸರಿನಲ್ಲಿ ಮುಡಿ ಉತ್ಸವಗಳು ನಡೆಯುವುದು ವಿಶೇಷವಾಗಿದೆ. ಇನ್ನು ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆಗೆ ಆಷಾಢ ಮಾಸದ ಪೂಜೆ ಸಲ್ಲಿಸಲು ಬೆಳಗ್ಗೆ ಜಿಟಿಜಿಟಿ ಮಳೆಯಲ್ಲೇ ಭಕ್ತರು ಆಗಮಿಸಿ, ಸರದಿ ಸಾಲಿನಲ್ಲಿ ನಿಂತು ಆಶೀರ್ವಾದ ಪಡೆದರು.
ಮಹಾರಾಜರ ಹೆಸರಿನಲ್ಲಿ ವಿಶಿಷ್ಟ ಉತ್ಸವ: ಇಂದು ಬೆಳಗ್ಗೆ 3.30 ರಿಂದಲೇ ಚಾಮುಂಡಿ ತಾಯಿಯ ಮೂಲ ಮೂರ್ತಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಮಾಡಲಾಯಿತು. ನಂತರ ಅಲಂಕಾರ ಮಾಡಿ ಭಕ್ತರಿಗೆ ಬೆಳಗ್ಗೆ 5.30 ರಿಂದ ರಾತ್ರಿ 10 ಗಂಟೆ ವರೆಗೆ ನಿರಂತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆಗೆ ಮಹಾಮಂಗಳಾರತಿ ನಡೆದಿದ್ದು, ವಿಶೇಷ ದರ್ಶನ ವ್ಯವಸ್ಥೆ ಜತೆಗೆ ಸಾಮಾನ್ಯ ದರ್ಶನಗಳು ಕಲ್ಪಿಸಲಾಗಿದೆ.
ಇಂದು ಮೈಸೂರು ಮಹಾರಾಜರ ವರ್ಧಂತಿ ಇರುವುದರಿಂದ ಅವರ ಹೆಸರಿನಲ್ಲಿ ಮುಡಿ ಉತ್ಸವಗಳು ನಡೆಯುತ್ತವೆ. ನಾಳೆ ಶನಿವಾರ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಇರುವುದರಿಂದ ಬೆಳಗೆಯಿಂದಲೇ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ನಾಳೆ ಬೆಳಗ್ಗೆ 9.30 ಕ್ಕೆ ಮಹಾಮಂಗಳಾರತಿಯ ನಂತರ ಚಿನ್ನದ ಪಲಕ್ಕಿಯ ಉತ್ಸವ, ಚಾಮುಂಡೇಶ್ವರಿಯ ವರ್ಧಂತಿಯ ದಿನ ನಡೆಯುವುದು ವಿಶೇಷವಾಗಿದೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿ ಶೇಖರ್ ದೀಕ್ಷಿತ್ ಮಾಧ್ಯಮಾಗಳಿಗೆ ಮಾಹಿತಿ ನೀಡಿದರು.
ನಾಳೆ ಚಾಮುಂಡೇಶ್ವರಿ ವರ್ಧಂತಿ: ಆಷಾಢ ಮಾಸದಲ್ಲಿ ಪ್ರತಿ ವರ್ಷ ನಾಡ ಅಧಿದೇವತೆಯ ವರ್ಧಂತಿ ಬರುವುದು ವಿಶೇಷ. ನಾಳೆ ಶನಿವಾರ ಚಾಮುಂಡೇಶ್ವರಿ ವರ್ಧಂತಿಯ ಧಾರ್ಮಿಕಾ ಕಾರ್ಯಕ್ರಮಗಳಲ್ಲಿ ಮೈಸೂರು ರಾಜ ಮನೆತನದ ಪ್ರಮೋದ ದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ರಾಜ ಮನೆತನದ ಕುಟುಂಬದವರು ವರ್ಧಂತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅದಕ್ಕೂ ಮುನ್ನ ಇಂದು 3ನೇ ಆಷಾಢ ಶುಕ್ರವಾರದ ಸಂದರ್ಭದಲ್ಲಿ ರಾಜವಂಶಸ್ಥರ ವರ್ಧಂತಿ ಇರುವುದರಿಂದ ಅವರ ಹೆಸರಿನಲ್ಲಿ ಮುಡಿ ಉತ್ಸವಗಳು ಹಾಗೂ ವರ್ಧಂತಿ ಉತ್ಸವಗಳು ನಡೆಯುವುದು ವಿಶೇಷ. ಚಾಮುಂಡೇಶ್ವರಿ ರಾಜ ಮನೆತನದ ಕುಲ ದೈವ ಆಗಿರುವುದು ವಿಶೇಷವಾಗಿದ್ದು, ಆದ್ದರಿಂದ ರಾಜರ ವರ್ಧಂತಿ ಹಾಗೂ ಚಾಮುಂಡೇಶ್ವರಿ ವರ್ಧಂತಿಗಳು ಆಷಾಢ ಮಾಸದಲ್ಲಿ ಬರುತ್ತವೆ.
ನಾಳಿನ ವರ್ಧಂತಿಯ ಧಾರ್ಮಿಕ ಕಾರ್ಯಕ್ರಮಗಳು: ಆಷಾಢ ಮಾಸದ ಜುಲೈ 27 ರಂದು ಶನಿವಾರ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಯ ವರ್ಧಂತಿ ನಡೆಯಲಿದೆ. ಬೆಳಗ್ಗೆ ಚಾಮುಂಡೇಶ್ವರಿ ತಾಯಿಗೆ ಮಹಾಮಂಗಳಾರತಿ, 10.30ಕ್ಕೆ ಚಾಮುಂಡೇಶ್ವರಿ ಅಮ್ಮನವರನ್ನ ಚಿನ್ನದ ಪಲ್ಲಕ್ಕಿ ಉತ್ಸವ, ಮಂಟಪತೋತ್ಸವ ನಡೆಯಲಿದ್ದು, ಬಳಿಕ ಪ್ರಸಾದ ವಿನಿಯೋಗ ನಡೆಯಲಿದೆ. ರಾತ್ರಿ 8.30ಕ್ಕೆ ಉತ್ಸವ ಫಲಪೂಜೆ, ಅಮ್ಮನವರ ದರ್ಬಾರ್ ಉತ್ಸವ, ಮಂಟಪೋತ್ಸವ ಹಾಗೂ ರಾಷ್ಟ್ರರ್ಶೀವಾದ ಜರುಗಲಿದೆ. ಚಾಮುಂಡೇಶ್ವರಿ ವರ್ಧಂತಿಯಾ ಹಿನ್ನೆಲೆ ಭಕ್ತರಿಗೆ ಬೆಳಗ್ಗೆ 8 ಗಂಟೆಯಿಂದ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.