ಚಿಕ್ಕಬಳ್ಳಾಪುರ: ನೀರಿನಲ್ಲಿ ಒಂದರ್ಧ ಗಂಟೆ ಈಜುವುದೇ ಕಷ್ಟದ ಕೆಲಸ. ಅಂಥದ್ರಲ್ಲಿ ಕೇವಲ 10 ದಿನಗಳಲ್ಲೇ ಈಜು ಕಲಿತಿರುವ 3 ವರ್ಷದ ಬಾಲಕಿ ಒಂದು ಗಂಟೆ ನೀರಿನಲ್ಲಿ ಶವಾಸನ ಮಾಡಿ ಅಚ್ಚರಿಗೊಳಿಸಿದ್ದಾಳೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಕೇಶವ ಹಾಗೂ ಅನುಷಾ ದಂಪತಿ ಬೇಸಿಗೆ ರಜೆಯನ್ನು ಮಕ್ಕಳು ಮನೆಯಲ್ಲಿ ಮೊಬೈಲ್ಗೆ ಸೀಮಿತವಾಗಿಡದೇ ಆರೋಗ್ಯ ಸಂರಕ್ಷಣೆ ಕಲೆಗಳ ಬಗ್ಗೆ ಹೇಳಿ ಕೊಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಕೇಶವ ಮಾಸ್ಟರ್ ಡ್ಯಾನ್ಸ್, ಯೋಗ ಜೊತೆಗೆ ಕೇವಲ 10 ದಿನಗಳಲ್ಲಿ ಈಜು ಕಲಿಸುತ್ತಿದ್ದಾರೆ.
ಅದರಂತೆ ಮೂರು ವರ್ಷದ ಓರ್ವ ಬಾಲಕಿ ಖರಾಯಿನ್ ಸಾಹಸ ಪ್ರದರ್ಶನ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ಬಾಲಕಿಯ ತಂದೆ ಜೀವನಕ್ಕಾಗಿ ಕಳ್ಳೆ ಪುರಿ ಮಾರಾಟ ಮಾಡುತ್ತಿದ್ದಾರೆ. ಮಗಳು ಬೇಸಿಗೆ ರಜೆ ದಿನಗಳನ್ನು ಕಳೆಯಲು ಈಜು ಕಲಿಕಾ ತರಬೇತಿ ಶಿಬಿರಕ್ಕೆ ಸೇರಿಸಿದ್ದರು. ಇದೀಗ ಖುರಾಯಿನ್ ಒಂದು ಗಂಟೆಗೂ ಅಧಿಕ ಸಮಯ ನೀರಿನಲ್ಲೇ ಶವಾಸನ ಮಾಡುವ ಮೂಲಕ ಲಿಮ್ಕಾ ದಾಖಲೆ ಬರೆಯಲು ಮುಂದಾಗಿದ್ದಾಳೆ.
ಖುರಾಯಿನ್ ಮಾತ್ರವಲ್ಲದೇ 4 ವರ್ಷದ ಮಕ್ಕಳು ಸೇರಿದಂತೆ 50 ವರ್ಷದ ನಾಗರಿಕರು ಕೂಡಾ ಈಜು ಕಲಿಯಲು ಮುಂದಾಗಿದ್ದಾರೆ. ಸದ್ಯ ಕೇಶವ ಮಾಸ್ಟರ್ ಚಿಂತಾಮಣಿ ನಗರದ ಸೊಣ್ಣಶೆಟ್ಟಿ ಹಳ್ಳಿ ಬಡಾವಣೆಯ ವಾಣಿ ಶಾಲೆ ಮುಂಭಾಗ ಕೇಶವ ಅಕಾಡೆಮಿ ನಡೆಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳಿಗೆ ಹಾಗೂ ಈಜು ಬಾರದ ಯುವಜನತೆಗೆ ಈಜು ಸೇರಿದಂತೆ ನೃತ್ಯ ಹಾಗೂ ಯೋಗ ಹೇಳಿಕೊಡುತ್ತಿದ್ದಾರೆ.
ಕೇಶವ ಮಾಸ್ಟರ್‌ಗೆ ಪತ್ನಿ ಅನುಷಾ ಸಾಥ್ ನೀಡುತ್ತಿದ್ದಾರೆ. ಉಳಿದಂತೆ ಮುನಿಕೃಷ್ಣ, ನಾಗರಾಜ್, ಬಾಬಣ್ಣ ಬೆಂಬಲವಾಗಿದ್ದಾರೆ.