ಬೆಂಗಳೂರು: 2024ರ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅಲೆಯನ್ನೂ ಮೀರಿ ಬಿಜೆಪಿ-ಜೆಡಿಎಸ್ ಮೈತ್ರಿಪಕ್ಷಗಳು ಮುನ್ನಡೆ ಸಾಧಿಸಿವೆ. ಇದೀಗ ಸೋಲು-ಗೆಲುವಿನ ವಿಶ್ಲೇಷಣೆ, ಪರಾಮರ್ಶೆ ನಡೆಯುತ್ತಿದೆ. ಇದರ ನಡುವೆ ಅಚ್ಚರಿ ಏನು ಗೊತ್ತೇ?. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲದಲ್ಲಿ ಎದುರಿಸಿದ ಎರಡೂ ಚುನಾವಣಾ ಫಲಿತಾಂಶಗಳು ಒಂದೇ. ಹೌದು, 2014 ಮತ್ತು 2024ರ ಫಲಿತಾಂಶದಲ್ಲಿ ಮೂರೂ ರಾಜಕೀಯ ಪಕ್ಷಗಳ ಪಡೆದ ಸೀಟುಗಳ ಸಂಖ್ಯೆ ಒಂದೇ. ಅಷ್ಟು ಮಾತ್ರವಲ್ಲ, ಎರಡು ಬಾರಿಯೂ ಕಾಂಗ್ರೆಸ್ ಅಧಿಕಾರದ ಗದ್ದುಗೆಯಲ್ಲಿತ್ತು ಎಂಬುದು ಇನ್ನೂ ವಿಶೇಷ.
ರಾಜ್ಯದಲ್ಲಿ ದಶಕದ ಹಿಂದಿನ ಫಲಿತಾಂಶ ಮರುಕಳಿಸಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ನೇತೃತ್ವದ ಎರಡು ಚುನಾವಣಾ ಫಲಿತಾಂಶವೂ ಸೇಮ್ ಟು ಸೇಮ್ ಆಗಿದೆ. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ 5 ವರ್ಷದ ನಂತರ ಅಧಿಕಾರ ಕಳೆದುಕೊಂಡಿತ್ತು. ಇದಾದ ನಂತರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ್ದರು. ಸಿದ್ದರಾಮಯ್ಯ ನೇತೃತ್ವದಲ್ಲಿ 2014ರ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಿದೆ. ಹೀಗಿದ್ದರೂ ಬಿಜೆಪಿಯನ್ನು ಹಿಂದಿಕ್ಕಲು ಆಡಳಿತಾರೂಢ ಕಾಂಗ್ರೆಸ್‌ಗೆ ಆಗಲಿಲ್ಲ. ಬಿಜೆಪಿ 17 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 9 ಸ್ಥಾನಕ್ಕೆ ಮಾತ್ರ ತೃಪ್ತಿಪಡಬೇಕಾಯಿತು. ಇನ್ನು, ಪ್ರಾದೇಶಿಕ ಪಕ್ಷ ಜೆಡಿಎಸ್ 2 ಸ್ಥಾನಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಕಾಕತಾಳಿಯವೋ ಏನೋ ಎಂಬಂತೆ 2024ರ ಚುನಾವಣೆಯಲ್ಲೂ 2014ರ ಚರಿತ್ರೆ ಪುನರಾವರ್ತನೆಯಾಗಿದೆ. 2019ರಲ್ಲಿ ರಚನೆಯಾದ ಬಿಜೆಪಿ ಸರ್ಕಾರ 2023ಕ್ಕೆ ಅಧಿಕಾರ ಮುಗಿಸಿ ಚುನಾವಣೆ ಎದುರಿಸಿ ಸೋಲು ಕಂಡಿತು. ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದರು. ಅವರ ನೇತೃತ್ವದಲ್ಲಿಯೇ ಈಗ ಚುನಾವಣೆ ನಡೆದಿದೆ. ಈ ಬಾರಿಯ ಫಲಿತಾಂಶದಲ್ಲಿಯೂ ಬಿಜೆಪಿಗೆ 17 ಸ್ಥಾನ, ಕಾಂಗ್ರೆಸ್‌ಗೆ 9 ಸ್ಥಾನ ಮತ್ತು ಜೆಡಿಎಸ್‌ಗೆ 2 ಸ್ಥಾನ ಸಿಕ್ಕಿದೆ. 2014ರಂತೆ ಈ ಬಾರಿಯೂ ಬಿಜೆಪಿಯನ್ನು ಕಟ್ಟಿಹಾಕಲು ಆಡಳಿತಾರೂಢ ಕಾಂಗ್ರೆಸ್‌ಗೆ ಸಾಧ್ಯವಾಗಲೇ ಇಲ್ಲ. ಗ್ಯಾರಂಟಿ ಯೋಜನೆಗಳ ಅಲೆಯ ನಡುವೆ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದರೂ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಸಫಲವಾಯಿತು.
ಹೀಗಾಗಿ, ದಶಕದ ಹಿಂದೆ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ರಚನೆಯಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ನಡೆದಾಗ ಬಂದ ಫಲಿತಾಂಶವೇ ಈ ಬಾರಿಯೂ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ರಚನೆಯಾಗಿ ಸಿದ್ದರಾಮಯ್ಯ ನೇತೃತ್ವದಲ್ಲೇ ನಡೆದ ಚುನಾವಣೆಯಲ್ಲಿಯೂ ಹೊರ ಬಂದಿದ್ದು 'ಹಿಸ್ಟರಿ ರಿಪೀಟ್' ಎನ್ನುವಂತಾಗಿದೆ.
ಎರಡಂಕಿ ದಾಟಲಿಲ್ಲ, ಒಂದಂಕಿಗೆ ಕುಸಿಯಲಿಲ್ಲ: ಕಳೆದೆರಡು ದಶಕದಲ್ಲಿ ರಾಜ್ಯದಲ್ಲಿ ನಡೆದ 5 ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಮಣೆ ಹಾಕಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಬಿಜೆಪಿ ಎರಡಂಕಿ ದಾಟಿದ ಫಲಿತಾಂಶ ಪಡೆದರೆ ಕಾಂಗ್ರೆಸ್ ಒಮ್ಮೆಯೂ ಎರಡಂಕಿ ತಲುಪಿಲ್ಲ. ಜೆಡಿಎಸ್ ಅಂತೂ 2 ಸ್ಥಾನಕ್ಕೆ ಸೀಮಿತವಾಗಿದೆ. 2000ನೇ ಇಸವಿಯ ನಂತರ ಬಿಜೆಪಿಯೇ ಪಾರಮ್ಯ ಮೆರೆದಿದೆ. 2004ರ ಚುನಾವಣೆಯನ್ನು ಅವಲೋಕಿಸಿದರೆ ಬಿಜೆಪಿ 18 ಸ್ಥಾನ ಪಡೆದರೆ, ಕಾಂಗ್ರೆಸ್ 8 ಸ್ಥಾನ ಹಾಗು ಜೆಡಿಎಸ್ 2 ಸ್ಥಾನ ಗಳಿಸಿತ್ತು. ರಾಜ್ಯದಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಇದ್ದರೂ ಬಿಜೆಪಿಗೆ ಮುನ್ನಡೆಯಾಯಿತು. 2009ರಲ್ಲಿ ನಡೆದ ಚುನಾವಣೆಯ ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೆ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿತ್ತು. ಹೀಗಿದ್ದರೂ ಬಿಜೆಪಿಗೆ 19 ಸ್ಥಾನ ಸಿಕ್ಕರೆ, ಕಾಂಗ್ರೆಸ್ ಕೇವಲ 6 ಸ್ಥಾನ ಪಡೆಯಿತು. ಜೆಡಿಎಸ್‌ಗೆ 3 ಸ್ಥಾನ ಸಿಕ್ಕಿತ್ತು.
2014ರಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ಎರಡೂ ಕಡೆ ಕಾಂಗ್ರೆಸ್ ಸರ್ಕಾರವೇ ಇದ್ದರೂ ಹೆಚ್ಚಿನ ಸ್ಥಾನ ಗೆದ್ದಿದ್ದು ಮಾತ್ರ ಬಿಜೆಪಿ. 17 ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ 9 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತು. ಜೆಡಿಎಸ್ ಸತತ ಮೂರನೇ ಬಾರಿಗೆ 2 ಸ್ಥಾನಗಳನ್ನಷ್ಟೇ ಪಡೆಯಲು ಸಾಧ್ಯವಾಗಿತ್ತು. 2019ರಲ್ಲಿ ನಡೆದ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರವಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. ಆದರೂ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿತ್ತು. ರಾಜ್ಯ ಬಿಜೆಪಿ ಮಟ್ಟಿಗೆ ದಾಖಲೆ ಎನ್ನುವಂತೆ 25 ಸ್ಥಾನ ಸಿಕ್ಕರೆ ಕಾಂಗ್ರೆಸ್ ಕೇವಲ 1 ಸ್ಥಾನ ಮತ್ತು ಜೆಡಿಎಸ್ ಕೂಡ 1 ಸ್ಥಾನಕ್ಕೆ ಸೀಮಿತವಾಯಿತು. ಈಗ 2024ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಗ್ಯಾರಂಟಿಯ ರಕ್ಷಣೆ ಇದ್ದರೂ ಬಿಜೆಪಿಯನ್ನು ಕಟ್ಟಿಹಾಕಲು ಆಡಳಿತಾರೂಢ ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಈ ಬಾರಿಯೂ ಹೆಚ್ಚಿನ ಸ್ಥಾನ ಬಿಜೆಪಿ ಪಾಲಾಗಿದೆ. ಬಿಜೆಪಿ 17 ಸ್ಥಾನದಲ್ಲಿ ಗೆದ್ದರೆ ಕಾಂಗ್ರೆಸ್ 9 ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಜೆಡಿಎಸ್ ಮತ್ತೊಮ್ಮೆ 2 ಸ್ಥಾನವನ್ನು ದಕ್ಕಿಸಿಕೊಂಡಿದೆ.
ಐದು ಚುನಾವಣೆಗಳಲ್ಲಿ 2004, 2019, 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಅಧಿಕಾರದಲ್ಲಿದ್ದರೆ, 2009 ಮತ್ತು 2014ರಲ್ಲಿ ಮಾತ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿತ್ತು. ಆದರೆ ರಾಜ್ಯದಲ್ಲಿ 2004, 2014, 2019, 2024ರಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. 2009ರಲ್ಲಿ ಮಾತ್ರ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆದರೆ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಗೇ ಲೋಕಸಭಾ ಚುನಾವಣೆಯಲ್ಲಿ ಜನರು ಮಣೆ ಹಾಕಿದ್ದು ಗಮನಾರ್ಹ.
ವರ್ಷ | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರೆ |
2004 | 18 | 8 | 2 | -- |
2009 | 19 | 6 | 3 | -- |
2014 | 17 | 9 | 2 | -- |
2019 | 25 | 1 | 1 | 1 |
2024 | 17 | 9 | 2 | -- |