ಶಿವಮೊಗ್ಗ: ಮಲೆನಾಡು ಹಾಗೂ ಬಯಲು ಸೀಮೆ ರೈತರ ಜೀವನಾಡಿ ಭದ್ರಾ ನದಿ ತುಂಬಿ ಹರಿಯುತ್ತಿದೆ. ಬಿಆರ್ಪಿಯಲ್ಲಿರುವ ಭದ್ರಾ ಅಣೆಕಟ್ಟು ಭರ್ತಿಯಾಗಿದೆ. ಅಣೆಕಟ್ಟೆಗೆ 30 ಸಾವಿರ ಕ್ಯೂಸೆಕ್ ಒಳ ಹರಿವಿದ್ದು, ಸುಮಾರು 20 ಸಾವಿರ ಕ್ಯೂಸೆಕ್ ನೀರನ್ನು ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ಬಿಡಲಾಗಿದೆ.
ಭದ್ರಾ ನದಿ ಪಶ್ಚಿಮ ಘಟ್ಟದ ತಪ್ಪಲಲ್ಲಿ ಹುಟ್ಟುತ್ತದೆ. ಶಿವಮೊಗ್ಗ ತಾಲೂಕು ಕೊಡಲಿಯಲ್ಲಿ ತುಂಗಾ ನದಿ ಸೇರಿ ಮುಂದೆ ತುಂಗಭದ್ರಾ ನದಿಯಾಗಿ ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಯಲ್ಲಿ ಹರಿಯುತ್ತದೆ. ನಂತರ ಕೃಷ್ಣ ನದಿ ಸೇರಿ ಆಂಧ್ರದ ಮೂಲಕ ಬಂಗಾಳಕೊಲ್ಲಿ ಸೇರುತ್ತದೆ.
ಭದ್ರಾ ಅಣೆಕಟ್ಟೆ ಭರ್ತಿಯಾದರೆ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳ ರೈತರಿಗೆ ಅನುಕೂಲವಾಗುತ್ತದೆ.
ತುಮಕೂರಿನ ನಿವಾಸಿ ದೀಪ ಪ್ರತಿಕ್ರಿಯಿಸಿ, "ನಗರ ಪ್ರದೇಶದಲ್ಲಿರುವ ನಮಗೆ ಭದ್ರಾ ಅಣೆಕಟ್ಟೆಯಿಂದ ನೀರು ಹರಿಯುವುದನ್ನು ನೋಡಿ ತುಂಬಾ ಸಂತೋಷವಾಯಿತು. ನಾವು ಈ ಕಡೆ ಬಂದಾಗಲೆಲ್ಲ ಅಣೆಕಟ್ಟು ಯಾವಾಗ ತುಂಬುತ್ತದೆ ಎಂದು ಕಾಯುತ್ತಿದ್ದೆವು" ಎಂದರು.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಜಿಗಣಿಯಿಂದ ಆಗಮಿಸಿದ್ದ ರೈತ ಹನುಮಂತಪ್ಪ ಪ್ರತಿಕ್ರಿಯಿಸಿ, "ಕಳೆದ ವರ್ಷ ಮಳೆ ಕೊರತೆಯಿಂದ ಅಣೆಕಟ್ಟೆಗೆ ನೀರಿನ ಕೊರತೆ ಉಂಟಾಗಿತ್ತು. ಇದರಿಂದ ಕೃಷಿಕರಾದ ನಮಗೆ ಸಮಸ್ಯೆಯಾಗಿತ್ತು. ಈಗ ಅಣೆಕಟ್ಟು ತುಂಬಿದೆ. ಭತ್ತ ಬೆಳೆಯಲು ಅನುಕೂಲವಾಗಿದೆ. ಕೊನೆಯ ಭಾಗಕ್ಕೂ ನೀರು ಹರಿಸುತ್ತೇವೆ ಎಂಬ ಅಧಿಕಾರಿಗಳ ಹೇಳಿಕೆ ಸಂತೋಷ ನೀಡಿದೆ" ಎಂದರು.