ಬೆಂಗಳೂರು : ಆನ್ಲೈನ್ ಮೂಲಕ 10 ಸಾವಿರ ರೂ. ಬಾಡಿಗೆ ಕಾರು ಬುಕ್ ಮಾಡಿದ ವ್ಯಕ್ತಿಯೊಬ್ಬರಿಗೆ ಸೈಬರ್ ಖದೀಮರು ಬರೋಬ್ಬರಿ 20 ಲಕ್ಷ ರೂ. ಹಣವನ್ನ ವಂಚಿಸಿದ್ದಾರೆ.
ಇಂದಿರಾನಗರ ನಿವಾಸಿ ಕೆ. ಸುಮನಾ ಪ್ರಸಾದ್ ಎಂಬುವರು ವಂಚನೆಗೊಳಗಾಗಿದ್ದು, ಈ ಸಂಬಂಧ ನಗರದ ಪೂರ್ವ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸುಮನಾ ಪ್ರಸಾದ್ ಎಬುವರು ಕೆಲಸ ನಿಮಿತ್ತ ಹೊರ ಹೋಗಲು ಜ.23ರಂದು ಕಾರು ಬಾಡಿಗೆ ಪಡೆಯಲು ಗೂಗಲ್ನಲ್ಲಿ ಶೋಧ ನಡೆಸಿದ್ದರು. ಈ ವೇಳೆ ಸ್ಪೇನಿ ಕಾರ್ ಎಂಬ ವೆಬ್ಸೈಟ್ನಲ್ಲಿ ಕಾರು ಬುಕ್ ಮಾಡಿ ಕ್ಯೂ.ಆರ್. ಕೋಡ್ ಮೂಲಕ 10 ಸಾವಿರ ರೂಪಾಯಿ ಪಾವತಿಸಿದ್ದರು. ಬಳಿಕ ಆರ್ಡರ್ ರದ್ದು ಮಾಡಿದ್ದರು. ಗೂಗಲ್ ಮುಖಾಂತರ ಕಸ್ಟಮರ್ ಕೇರ್ ನಂಬರ್ ಪಡೆದು ಹಣ ವಾಪಸ್ ನೀಡುವಂತೆ ಮನವಿ ಮಾಡಿದ್ದರು.
ನಂತರ ಸೈಬರ್ ಚೋರರು ವಾಟ್ಸಪ್ ಕರೆ ಮಾಡಿ ಕಳುಹಿಸಲಾಗಿರುವ ಶೇರ್ ದಿ ಸ್ಕ್ರೀನ್ ಲಿಂಕ್ನ್ನ ಕ್ಲಿಕ್ ಮಾಡಿ ನೀಡಲಾಗುವ ಸೂಚನೆಯನ್ನ ಪಾಲಿಸಬೇಕು ಎಂದು ಹೇಳಿದ್ದರು. ವಂಚಕರ ಅಣತಿಯಂತೆ ಸಲಹೆ-ಸೂಚನೆಯನ್ನ ಪಾಲಿಸಿದ ದೂರುದಾರರಿಗೆ ಬ್ಯಾಂಕ್ಗೆ ಸಂಬಂಧಿಸಿದ ಕಸ್ಟಮರ್ ಐಡಿಯನ್ನ ಕಳುಹಿಸಿದ್ದರು. ಐಡಿ ಶೇರ್ ಮಾಡುತ್ತಿದ್ದಂತೆ ವಂಚಕರು, ದೂರುದಾರರ ಖಾತೆಯಲ್ಲಿದ್ದ 20 ಲಕ್ಷ ಹಣವನ್ನು ಎಗರಿಸಿದ್ದಾರೆ.
ಈ ಸಂಬಂಧ ನೀಡಿದ ದೂರಿನ ಮೇರೆಗೆ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಟೆಕ್ಕಿಗೆ ಬೆದರಿಸಿ ₹11 ಕೋಟಿ ದೋಚಿದ್ದ ಮೂವರು ಸೈಬರ್ ವಂಚಕರ ಬಂಧನ - CYBER FRAUDSTERS ARREST