ಮೈಸೂರು: "ಕಣ್ಮರೆಯ ಹಾದಿಯಲ್ಲಿರುವ ದೇಸಿ ಅಕ್ಕಿ ತಳಿಗಳನ್ನು ಮರಳಿ ಹೊಲಕ್ಕೆ ತರಬೇಕೆಂದರೆ, ಅದಕ್ಕೆ ರೈತರಷ್ಟೇ ಅಲ್ಲ, ಗ್ರಾಹಕರ ಪ್ರೋತ್ಸಾಹವೂ ಬೇಕು. ವೈವಿಧ್ಯಮಯ ದೇಸಿ ಅಕ್ಕಿಗಳ ಸೊಗಡಿನ ರುಚಿ ಮೈಸೂರಿನ ಗ್ರಾಹಕರು ಸವಿಯಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಕರೆ ನೀಡಿದರು.
ಸಹಜ ಸಮೃದ್ಧ ಮತ್ತು ಭತ್ತ ಉಳಿಸಿ ಆಂದೋಲನದ ಆಶ್ರಯದಲ್ಲಿ ಶನಿವಾರ ನಂಜರಾಜ ಬಹದ್ದೂರು ಛತ್ರದಲ್ಲಿ ಆರಂಭವಾದ ಎರಡು ದಿನಗಳ ‘ದೇಸಿ ಅಕ್ಕಿ ಮೇಳ' ವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ವೈವಿಧ್ಯಮಯ ಆಹಾರ ಸಂಸ್ಕೃತಿಗೆ ಹೆಸರಾದ ದೇಶ ನಮ್ಮದು. ಇದಕ್ಕೆ ಪೂರಕವಾಗಿ ಅಸಂಖ್ಯಾತ ಬಗೆಯ ಬೆಳೆಗಳು, ತಳಿಗಳು ನಮ್ಮಲ್ಲಿವೆ. ನೂರಾರು ವರ್ಷಗಳಿಂದ ರೈತರು ಇವುಗಳನ್ನು ಉಳಿಸಿಕೊಂಡು ಬಂದಿದ್ದಾರೆ. ದೇಸಿ ಅಕ್ಕಿ ನಮ್ಮ ಆಹಾರ ಸಂಸ್ಕೃತಿ-ಸೊಗಡಿನೊಂದಿಗೆ ಬೆಳೆದುಕೊಂಡು ಬಂದಿದೆ. ಈ ತಳಿಗಳನ್ನು ಮುಂದಿನ ಪೀಳಿಗೆಗೂ ನೀಡುವ ಹೊಣೆ ಎಲ್ಲರ ಮೇಲಿದೆ’ ಎಂದರು.
ಮೈಸೂರು ಜಿಲ್ಲೆಯ ಸಾವಯುವ ಭತ್ತದ ಕೃಷಿಕರಿಗೆ ಅನುಕೂಲವಾಗುವಂತೆ ’ದೇಸಿ ಭತ್ತದ ಸಂಸ್ಕರಣಾ ಮಿಲ್’ ಸ್ಥಾಪನೆಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಹಕಾರ ನೀಡುವ ಆಶ್ವಾಸನೆ ನೀಡಿದರು. ಅಪರೂಪದ ಭತ್ತದ ತಳಿಗಳನ್ನು ಸಂರಕ್ಷಿಸಿರುವ ಟಿ.ನರಸೀಪುರದ ಸಿದ್ಧನಹುಂಡಿಯ ಗೀತಾ ಮತ್ತು ಶ್ರೀನಿವಾಸಮೂರ್ತಿ ಭತ್ತವನ್ನು ಒನಕೆಯಲ್ಲಿ ಕುಟ್ಟುವ ಮೂಲಕ ಮೇಳಕ್ಕೆ ಚಾಲನೆ ನೀಡಿದರು.
ಮಂಡ್ಯದ ರೈತ ವಿಜ್ಞಾನಿ ಬೋರೇಗೌಡರು ಅಭಿವೃದ್ಧಿಪಡಿಸಿರುವ 'ಸಿದ್ದ ಸಣ್ಣ’ಭತ್ತದ ತಳಿಯನ್ನು ಕೇಂದ್ರೀಯ ಆಹಾರ ಸಂಶೋಧನಾಲಯದ ನಿರ್ದೇಶಕರಾದ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಬಿಡುಗಡೆ ಮಾಡಿದರು. ‘ಸಾಂಪ್ರದಾಯಿಕ ತಳಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಗ್ರಾಹಕರು ಇವುಗಳ ಬಳಕೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು. ಇದೇ ಸಂದರ್ಭದಲ್ಲಿ ಅವರು ದೇಸಿ ಬೀಜದ ಕೈಪಿಡಿ’ ಬಿಡುಗಡೆ ಮಾಡಿದರು.
ಮೇಳದ ವಿಶೇಷ: ಎರಡು ದಿನಗಳ ದೇಸಿ ಅಕ್ಕಿ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳ ಭತ್ತ ಸಂರಕ್ಷಕರು ಅಪರೂಪದ ದೇಸಿ ತಳಿ ಅಕ್ಕಿಯನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತಂದಿದ್ದಾರೆ. 250 ಬಗೆಯ ದೇಸಿ ಭತ್ತದ ತೆನೆ, ಬೀಜ, ತೋರಣ, ಆಭರಣಗಳ ಪ್ರದರ್ಶನ ಮತ್ತು ಮಾರಾಟ ಇದೆ. ಕೆಂಪಕ್ಕಿ, ಸುವಾಸನೆ ಅಕ್ಕಿ, ಕಪ್ಪು ಅಕ್ಕಿ, ಔಷಧಿ ಅಕ್ಕಿ, ದಪ್ಪಕ್ಕಿ ಮೊದಲಾದ 30 ಬಗೆಯ ತಳಿಗಳ ಅಕ್ಕಿಯ ಮಾರಾಟ ಏರ್ಪಡಿಸಲಾಗಿದೆ.
ಮೇಳದಲ್ಲಿ ಸಿರಿಧಾನ್ಯ , ತರಕಾರಿ ಬಿತ್ತನೆ ಬೀಜಗಳು, ಗೆಡ್ಡೆ ಗೆಣಸು ಮತ್ತು ಸಾವಯವ ಉತ್ಪನ್ನಗಳು, ಹಣ್ಣಿನ ಗಿಡಗಳು ಮಾರಾಟಕ್ಕೆ ಬಂದಿವೆ. ಮೇಳದ ಅಂಗವಾಗಿ ಸಾಂಪ್ರದಾಯಿಕ ಅಡುಗೆಗಳನ್ನು ಪ್ರೋತ್ಸಾಹಿಸಲೆಂದು ಅಕ್ಕಿ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತರು ದೇಸಿ ಅಕ್ಕಿಯಿಂದ ಮಾಡಿದ ಯಾವುದೇ ಬಗೆಯ ಅಡುಗೆಗಳನ್ನು ಮನೆಯಲ್ಲೇ ತಯಾರಿಸಿ, ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಮೇಳಕ್ಕೆ ತರಬಹುದು.
ಭತ್ತದ ಕೃಷಿ ಮತ್ತು ಸಂಸ್ಕೃತಿ ಬಗ್ಗೆ ಎಳೆಯರಿಗೆ ಆಸಕ್ತಿ ಮೂಡಿಸಲು ಮಕ್ಕಳಿಗಾಗಿ ಭತ್ತದ ಲೋಕ -ನಾ ಕಂಡಂತೆ’ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. 12 ವರ್ಷದ ಒಳಗಿನ ಮಕ್ಕಳು ಭಾನುವಾರ ಬೆಳಗ್ಗೆ 10.30 ಗಂಟೆಗೆ ಮೇಳಕ್ಕೆ ಬರಬೇಕು. ಪ್ರವೇಶ ಶುಲ್ಕ ಉಚಿತ. ಮೇಳ ಭಾನುವಾರದವರೆಗೆ ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ನಡೆಯಲಿದೆ.