ಹುಬ್ಬಳ್ಳಿ, ಧಾರವಾಡ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಮುಖ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ನಡೆಸುವ ಮೂಲಕ ಅಕ್ರಮವಾಗಿ ಹಾಗೂ ದಾಖಲೆರಹಿತ ಹಣ, ವಸ್ತು ಸಾಗಣೆ ಸೇರಿದಂತೆ ಚುನಾವಣಾ ಅಕ್ರಮದ ಮೇಲೆ ಚುನಾವಣಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಅದರಂತೆ ಕಳೆದ ರಾತ್ರಿ ಅಣ್ಣಿಗೆರೆ ಕೊಂಡಿಕೊಪ್ಪ ಚೆಕ್ ಪೋಸ್ಟ್ ತಂಡ ದಾಖಲೆ ಇಲ್ಲದ 15 ಲಕ್ಷ 360 ಸಾವಿರ ರೂ ಮೌಲ್ಯದ 1,536 ಸೀರೆಗಳ ಬಂಡಲ್ ವಶಕ್ಕೆ ಪಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು, ಕೊಂಡಿಕೊಪ್ಪ ಚೆಕ್ ಪೋಸ್ಟ್‌ನಲ್ಲಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ್ದಾರೆ. ಗೂಡ್ಸ್ ವಾಹನದಲ್ಲಿದ್ದ ರೇಷ್ಮೆ ಸೀರೆಗಳು ಮತ್ತು ವಿವಿಧ ರೀತಿಯ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಜಾರಿ ವಿಭಾಗದ ಜಂಟಿ ಆಯುಕ್ತ ರವಿಕುಮಾರ, ವಾಣಿಜ್ಯ ತೆರಿಗೆ ಅಧಿಕಾರಿ ಗುರುಬಸಯ್ಯ ಹೊಸಮನಿ, ವಾಣಿಜ್ಯ ತೆರಿಗೆ ಇನ್ಸ್ಪೆಕ್ಟರ್ ಅಮರೇಶ್ ರಾಠೋಡ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿತು. ವಶಕ್ಕೆ ಪಡೆದ ಸೀರೆಗಳನ್ನು ಚುನಾವಣಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದ್ದು, ಯಾವ ಉದ್ದೇಶಕ್ಕೆ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ₹5 ಲಕ್ಷ ನಗದು ಪತ್ತೆ: ಸಾರಿಗೆ ಸಂಸ್ಥೆ ಬಸ್ ಮೂಲಕ ಸಾಗಿಸುತ್ತಿದ್ದ ದಾಖಲೆ ಇಲ್ಲದೆ 4,97,600 ರೂಪಾಯಿ ನಗದನ್ನು ಧಾರವಾಡದ ತೇಗೂರು ಚೆಕ್ ಪೋಸ್ಟ್‌ನಲ್ಲಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಿಪ್ಪಾಣಿಯಿಂದ ಭದ್ರಾವತಿಗೆ ತೆರಳುತ್ತಿದ್ದ ಬಸ್ನಲ್ಲಿ ಈ ಹಣ ಸಿಕ್ಕಿದೆ. ಚಿಕ್ಕಮಗಳೂರಿನ ಮಶೋದ್ ಎಂಬ ವ್ಯಕ್ತಿ ಹಣ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ.
ತೇಗೂರು ಚೆಕ್ ಪೋಸ್ಟ್ ಬಳಿ ಬಸ್ ತಪಾಸಣೆ ವೇಳೆ, ಮಶೋದ್ನ ಬ್ಯಾಗ್ನಲ್ಲಿ 4,97,600 ರೂಪಾಯಿ ನಗದು ಪತ್ತೆಯಾಗಿದೆ. ಬೆಳಗಾವಿ ಮತ್ತು ನಿಪ್ಪಾಣಿಗೆ ಟಿಂಬರ್ ಪೂರೈಕೆ ಮಾಡಿದ ಹಣ ಎಂದು ಮಶೋದ್ ಮಾಹಿತಿ ನೀಡಿದ್ದಾರೆ. ಆದರೆ ಯಾವುದೇ ದಾಖಲಾತಿಯನ್ನು ಪೂರೈಸದ ಹಿನ್ನೆಲೆಯಲ್ಲಿ ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಧಾರವಾಡ, ಬಳ್ಳಾರಿ, ಬಾಗಲಕೋಟೆಯಲ್ಲಿ ನಗದು ಸಹಿತ ಮದ್ಯ ಜಪ್ತಿ - Pre Poll Seizures