ಶಿವಮೊಗ್ಗ: ಮುಂದಿನ ಒಂದು ತಿಂಗಳಲ್ಲಿ ಸೊರಬ ತಾಲೂಕಿನಲ್ಲಿ 140 ಕೋಟಿ ರೂ ವೆಚ್ಚಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಇಂದು ಸೊರಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ಸೊರಬ ತಾಲೂಕಿನ ವರದಾ ನದಿಗೆ ಬ್ಯಾರೇಜ್ ಹಾಗೂ ತಡೆಗೋಡೆ ನಿರ್ಮಾಣಕ್ಕೆ 62 ಕೋಟಿ ರೂ ಮಂಜೂರಾಗಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದರು.
ಸೊರಬ ತಾಲೂಕಿನಲ್ಲಿ ಕೊರತೆ ಇರುವ ಶೇ.95 ರಷ್ಟು ಶಿಕ್ಷಕರ ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗುತ್ತಿದೆ. ಶಾಲಾ ಮಕ್ಕಳಿಗೆ ವಾರದ ಎರಡು ದಿನ ನೀಡಲಾಗುತ್ತಿದ್ದ ಮೊಟ್ಟೆಯನ್ನು ಅಜೀಮ್ ಪ್ರೇಮ್ ಜಿ ಫೌಂಡೇಶನ್ನ ಸಹಯೋಗದೊಂದಿಗೆ ಮುಂದಿನ ಮೂರು ವರ್ಷಗಳವರೆಗೆ ವಾರದ ಆರು ದಿನಗಳ ಕಾಲ ಮೊಟ್ಟೆ ವಿತರಿಸುವ ಕಾರ್ಯಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಸರ್ಕಾರ 1,500 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚ ಭರಿಸಲಿದೆ. ಅಲ್ಲದೆ ಶಾಲಾ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸರಬರಾಜು ಮಾಡಲು ಉದ್ದೇಶಿಸಿದ್ದು, ಪ್ರತಿ ದಿನ ಬೆಳಿಗ್ಗೆ 55 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸೊರಬ, ಶಿರಾಳಕೊಪ್ಪ ಮತ್ತು ಆನವಟ್ಟಿ ಸುತ್ತಮುತ್ತಲ ಪ್ರದೇಶಗಳ 354 ಗ್ರಾಮಗಳ ನಿವಾಸಿಗಳಿಗೆ ಶರಾವತಿ ನದಿಯಿಂದ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸುಮಾರು 600 ಕೋಟಿ ರೂ ವೆಚ್ಚದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳುವ ಆಶಯ ಹೊಂದಿದ್ದೇವೆ. ತಾಲೂಕಿನ ಜನರಿಗೆ ಯಾವುದೇ ಅಡಚಣೆಯಾಗದಂತೆ ದಂಡಾವತಿ ನದಿಯ ನೀರನ್ನು ಎರಡು ಕೆನಾಲ್ಗಳ ಮೂಲಕ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ತಾಲೂಕಿನಲ್ಲಿ ವಿವಿಧ ಕೆನಾಲ್ಗಳ ಮೂಲಕ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂರಕ್ಷಿಸಿ ಸದ್ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಅಲ್ಲದೆ ಚಾನಲ್‌ಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯ ಕೃಷಿ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಸಹಕಾರಿಯಾಗುವಂತೆ ವಿವಿಧ ಸ್ಥಳಗಳಲ್ಲಿ ವಿದ್ಯುತ್ ಉಪ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಕೃಷಿ ಚಟುವಟಿಕೆಗಳಿಗೆ ಸೋಲಾರ್ ಬಳಕೆಗೆ ಉತ್ತೇಜನ ನೀಡಲು ವಿಶೇಷ ಗಮನಹರಿಸಲಾಗುವುದು. ಅರಣ್ಯದಂಚಿನಲ್ಲಿ ವಾಸಿಸುವ ವನವಾಸಿಗಳಿಗೆ ಹಕ್ಕು ಪತ್ರ ನೀಡುವ ಬಗ್ಗೆ ಕ್ರಮವಹಿಸಲಾಗಿದೆ. ಯಾರನ್ನೂ ಒಕ್ಕಲೆಬ್ಬಿಸುವ ಉದ್ದೇಶ ಸರ್ಕಾರದ ಮುಂದಿಲ್ಲ. ಹೊಸದಾಗಿ ಅರಣ್ಯ ಭೂಮಿ ಒತ್ತುವರಿ ಮಾಡುವವರನ್ನು ಸರ್ಕಾರ ಪುರಸ್ಕರಿಸಲಾಗದು. ವಿಮಾನ ನಿಲ್ದಾಣದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಸರ್ಕಾರದ ವತಿಯಿಂದ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ವೇಳೆ ಸೊರಬ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: 20 ಸಾವಿರ ಅಂಗನವಾಡಿಗಳು 'ಗವರ್ನಮೆಂಟ್ ಮಾಂಟೆಸ್ಸರಿ' ಆಗಿ ಪರಿವರ್ತನೆ: ಲಕ್ಷ್ಮೀ ಹೆಬ್ಬಾಳ್ಕರ್ - Government Montessori