ಬೆಳಗಾವಿ: ಸಿಬ್ಬಂದಿಯೂ ಸೇರಿ 14 ಜನರು ಗೋಕಾಕ ನಗರದ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಿಂದ 74.86 ಕೋಟಿ ರೂ ಸಾಲ ಪಡೆದು ಮರಳಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ಚೇರ್ಮನ್ ಜೀತೇಂದ್ರ ಮಾಂಗಳೇಕರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಗೋಕಾಕ ನಗರದ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟ ಹಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದು ಮರಳಿಸದೆ ವಂಚಿಸಲಾಗಿದೆ. ಸಾಲ ಪಡೆದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಬೇರೆಡೆ ಆಸ್ತಿ ಮಾಡಿಕೊಂಡಿರುವ ಕುರಿತು ಐವರು ಬ್ಯಾಂಕ್ ಸಿಬ್ಬಂದಿ ಸೇರಿ 14 ಜನರ ವಿರುದ್ಧ ಗೋಕಾಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬ್ಯಾಂಕಿನಲ್ಲಿ ಠೇವಣಿ ಹಣ ಇಟ್ಟ ಗ್ರಾಹಕರು, ಫಿಗ್ಮಿ ತುಂಬಿದ ವ್ಯಾಪಾರಿಗಳಲ್ಲಿ ಈಗ ಆತಂಕ ಶುರುವಾಗಿದೆ.
ಇದೇ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳಾದ ಸಾಗರ ಸಬಕಾಳೆ, ವಿಶ್ವನಾಥ ಬಾಗಡೆ, ಸಂಭಾಜೀ ಗುರುಪಾದೆ, ಸಿದ್ದಪ್ಪ ಪವಾರ, ದಯಾನಂದ ಉಪ್ಪಿನ ಸೇರಿ ತಮ್ಮ ಸಂಬಂಧಿಕರ ಜೊತೆಗೂಡಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂಜನಾ ಸಬಕಾಳೆ, ಮಲ್ಲವ್ವ ಸಬಕಾಳೆ, ಗೌರವ್ವ ಹವಾಲ್ದಾರ, ಚಂದ್ರವ್ವ ಹವಾಲ್ದಾರ, ಪರಸಪ್ಪ ಮಾಳೋಜಿ, ರಾಧಾ ಮಾಳೋಜಿ, ಸಂದೀಪ ಮರಾಠೆ ಹಾಗು ಕಿರಣ ಸುಪಾಲಿ ಎಂಬವರ ವಿರುದ್ಧ ವಂಚನೆ ಆರೋಪವಿದೆ.
ಜುಲೈ 2021ರಿಂದ ಏಪ್ರಿಲ್ 2023ರವರೆಗಿನ ಅವಧಿಯಲ್ಲಿ ಬ್ಯಾಂಕ್‌ಗೆ ವಂಚಿಸಲಾಗಿದೆ. ಈ ಮೊದಲು ಹಂತ ಹಂತವಾಗಿ 6.97 ಕೋಟಿ ಹಣವನ್ನು ಆರೋಪಿಗಳು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರು. ಆದರೆ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 81.83 ಕೋಟಿ ಹಣವನ್ನು ಆರೋಪಿಗಳು ಸಾಲ ಪಡೆದಿದ್ದರು. ವಾಪಸ್ ಕಟ್ಟಬೇಕಿರುವ 74.86 ಕೋಟಿ ಸಾಲ ಪಾವತಿಸದೇ ವಂಚಿಸಲಾಗಿದೆ. ಬ್ಯಾಂಕ್‌ನಲ್ಲಿ ಇದ್ದುಕೊಂಡೇ ಸಂಬಂಧಿಕರು, ಸ್ನೇಹಿತರಿಗೆ ಸಿಬ್ಬಂದಿಗಳು ಲೋನ್ ಮಂಜೂರು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬ್ಯಾಂಕ್‌ಗೆ ಮುತ್ತಿಗೆ: ಬ್ಯಾಂಕ್ ಸಿಬ್ಬಂದಿ ಹಣ ಲಪಟಾಯಿಸಿರುವ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಗ್ರಾಹಕರು ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸಿಬ್ಬಂದಿ ಮತ್ತು ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಾವು ಕಷ್ಟಪಟ್ಟು ದುಡಿದ ಹಣ ಠೇವಣಿ ಇಟ್ಟಿದ್ದೇವೆ. ನಮ್ಮ ಹಣ ನಮಗೆ ಮರಳಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?: "ಎರಡು ದಿನಗಳ ಹಿಂದೆ ಮಹಾಲಕ್ಷ್ಮಿ ಬ್ಯಾಂಕ್ ಚೇರ್ಮನ್ ಜೀತೇಂದ್ರ ದೂರು ನೀಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಸೇರಿ 14 ಆರೋಪಿಗಳು ಸಾಲ ಪಡೆದು ಹಣ ವಾಪಸ್ ಮರಳಿಸದೇ ಮೋಸ ಮಾಡಿದ್ದಾರೆ. ಮೊದಲು ಆರು ಕೋಟಿ ರೂ. ಠೇವಣಿ ಇಟ್ಟು ಬಳಿಕ 74.86 ಕೋಟಿ ಸಾಲ ಪಡೆದಿದ್ದಾರೆ. ಸಾಲ ಮರುವಾಪತಿಸದೇ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಬ್ಯಾಂಕ್ ಗೋಕಾಕನಲ್ಲಿ ಎರಡು, ಚಿಕ್ಕೋಡಿ, ನಿಪ್ಪಾಣಿ, ಘಟಪ್ರಭಾ, ಬೆಳಗಾವಿಯಲ್ಲಿ ತಲಾ ಒಂದು ಬ್ರ್ಯಾಂಚ್ ಹೊಂದಿದೆ. 3 ಸಾವಿರ ಠೇವಣಿದಾರರು ಇದ್ದು, ಏಪ್ರಿಲ್‌ನಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳ ಶೋಧ ಕಾರ್ಯಕ್ಕೆ ಮೂರು ತಂಡ ರಚನೆ ಮಾಡಲಾಗಿದೆ. ಈ ಕುರಿತು ಮೇಲಾಧಿಕಾರಿಗಳ ಜೊತೆಗೆ ಚರ್ಚಿಸಿ, ಪ್ರಕರಣ ಸಿಐಡಿಗೆ ವರ್ಗಾಯಿಸುವ ಬಗ್ಗೆ ನಿರ್ಧರಿಸಲಾಗುವುದು" ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಸತತ 32 ಗಂಟೆ ನಿಮಜ್ಜನ ಮೆರವಣಿಗೆ: ಹೊಸ ದಾಖಲೆ ಬರೆದ ಬೆಳಗಾವಿ ಗಣೇಶೋತ್ಸವ - Ganeshotsava Procession