ಮಂಗಳೂರು: ಎನ್ಐಟಿಕೆ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರಕರಣ ಸಂಬಂಧ ಒಟ್ಟು 101 ಮಂದಿ ವಿರುದ್ಧ ಸುರತ್ಕಲ್ ಪೊಲೀಸರು ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿದ್ದಾರೆ.
ಸುರತ್ಕಲ್‌ನ ಟೋಲ್ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಮಿಥುನ್ ರೈ, ಮುನೀರ್ ಕಾಟಿಪಳ್ಳ, ರಾಘವೇಂದ್ರ, ಇಮ್ತಿಯಾಜ್, ಶ್ರೀನಾಥ್ ಕುಳಾಯಿ, ರಾಜೇಶ್ ಶೆಟ್ಟಿ, ರಾಜೇಶ್ ಕುಳಾಯಿ, ಧನರಾಜ್ ಕೋಟ್ಯಾನ್, ರಿತೇಶ್ ಕುಮಾರ್, ಆಯಾಜ್ ಕೃಷ್ಣಾಪುರ, ಸಲೀಮ್, ರಮೇಶ್ ಟಿ.ಎನ್. ಮತ್ತಿತರರಿಗೆ ಮೇ 4 ರಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಜಾರಿ ಮಾಡಲಾಗಿದೆ.
ಈ ಬಗ್ಗೆ ಆಗ ಸುರತ್ಕಲ್ ಪಿಐ ಆಗಿದ್ದ ಚಂದ್ರಪ್ಪ ನಾಯ್ಕ್ ಎಫ್ಐಆರ್ ದಾಖಲಿಸಿದ್ದು, ಬಳಿಕ ಪಿಐ ಮಹೇಶ್ ಪ್ರಸಾದ್ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಕುರಿತು ಎನ್ ಎಚ್‌ಎಐ ಅಧಿಕಾರಿಗಳು ದೂರು ನೀಡಿದ್ದರು. ಎನ್‌ಐಟಿಕೆ ಟೋಲ್ ಕೇಂದ್ರ ರದ್ದಾಗಿ 2023 ಡಿಸೆಂಬರ್ಗೆ ಒಂದು ವರ್ಷ ಸಂದಿದ್ದು, ಅದಕ್ಕೆ ಮೊದಲು ನಡೆದಿದ್ದ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಟೋಲ್‌ಗೆ ಮುತ್ತಿಗೆ ಹಾಕಲಾಗಿತ್ತು.
ಇದನ್ನೂ ಓದಿ: ನೇಹಾ ಹಿರೇಮಠ ಕೊಲೆ ಪ್ರಕರಣ: ಫಯಾಜ್ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ - Neha murder case