ಚಾಮರಾಜನಗರ: ''ಮೂರ್ಖರ ರೀತಿ ಅವರು ಮಾತನಾಡುತ್ತಿದ್ದಾರೆ, ಅವರ ಮನೆಯ ಅನಾಹುತಕ್ಕೆ ನಾವು ಹೇಗೆ ಕಾರಣ, ಅವರ ಸಾವನ್ನು ನಾವು ಏಕೆ ಬಯಸೋಣ'' ಎಂದು ಸಚಿವ ಕೆ. ವೆಂಕಟೇಶ್ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆ ವಿರುದ್ಧ ಕಿಡಿಕಾರಿದರು.
ಚಾಮರಾಜನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್ಡಿ ಕುಮಾರಸ್ವಾಮಿ ಸಾವನ್ನು ಕಾಂಗ್ರೆಸ್ ಬಯಸಲಿದೆ ಎಂಬ ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ''ಹೆಚ್.ಡಿ. ದೇವೇಗೌಡರಿಗೆ ವಯಸ್ಸಾಗಿದೆ. ಪೆನ್ ಡ್ರೈವ್ ಪ್ರಕರಣದಿಂದ ಅವರ ಮನಸ್ಸಿಗೆ ನೋವಾಗಿದೆ. ಅವರು ಇನ್ನಷ್ಟು ವರ್ಷ ಸಾರ್ಥಕ ಜೀವನ ನಡೆಸಲಿ'' ಎಂದರು.
''ಇಷ್ಟು ದಿನ ಪೆನ್ ಡ್ರೈವ್ ಇದೆ ಎಂದು ತಿರುಗಾಡುತ್ತಿದ್ದುದು ದೇವರಾಜೇಗೌಡ, ಈಗ ಡಿಕೆಶಿ ಅನ್ನುತ್ತಿದ್ದಾರೆ. ಪೆನ್ ಡ್ರೈವ್ ಪ್ರಕರಣದ ಹಿಂದೆ ಬಿಜೆಪಿ ಕುತಂತ್ರ ಅಡಗಿದೆ. ದೇವರಾಜೇಗೌಡ ಅಂತವರು ನೂರು ಜನ ಆಚೆ ಬಂದರೂ ಸರ್ಕಾರ ಬೀಳಲ್ಲ'' ಎಂದ ಅವರು, ''ರೆಡ್ ಕಾರ್ನರ್ ನೋಟಿಸ್ ಕೊಡಲು ಎಸ್ಐಟಿ ಕ್ರಮ ವಹಿಸಲಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ'' ಎಂದು ಹೇಳಿದರು.
ಸರ್ಕಾರ 1 ವರ್ಷ ಪೂರೈಸಿರುವುದು ಸಂತೃಪ್ತಿ ತಂದಿದೆ- ಹೆಚ್.ಸಿ. ಮಹದೇವಪ್ಪ: ಬಳಿಕ ಸಚಿವ ಹೆಚ್.ಸಿ. ಮಹದೇವಪ್ಪ ಮಾಧ್ಯಮದವರೊಂದಿಗೆ ಮಾತನಾಡಿ, ''ಸರ್ಕಾರ 1 ವರ್ಷ ಪೂರೈಸಿರುವುದು ನಮಗೆ ಸಂತೃಪ್ತಿ ತಂದಿದೆ. 1 ಕೋಟಿಗೂ ಅಧಿಕ ಕುಟುಂಬಕ್ಕೆ ಆರ್ಥಿಕ ಸ್ವಾವಲಂಬನೆ ತರಲಾಗಿದೆ'' ಎಂದರು.
ಸರ್ಕಾರದ ಸಾಧನೆ ಶೂನ್ಯ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ''ಟ್ರೈನು ಹೋಗ್ತಾಯಿದೆ, ಗಡಗಡ ಅಲ್ಲಾಡ್ತಿದೆ, ರೈಲು ಬಿದ್ದು ಹೋಗಲ್ಲ. ಇವರಿಗೇನು ಲಾಭ ಸಿಗಲ್ಲ'' ಎಂದು ವ್ಯಂಗ್ಯವಾಡಿದರು.
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ''ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ'' ಎಂದರು.
ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ವಿಪಕ್ಷಗಳ ಟೀಕೆಗೆ ಉತ್ತರಿಸಿ, ''ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಉತ್ತಮವಾಗಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ'' ಎಂದು ಹೇಳಿದರು.