ಹರಾರೆ: ಜಿಂಬಾಬ್ವೆ ವಿರುದ್ಧದ ಐದನೇ ಮತ್ತು ಅಂತಿಮ ಟಿ-20 ಪಂದ್ಯವನ್ನು 42 ರನ್ಗಳಿಂದ ಗೆಲ್ಲುವ ಮೂಲಕ ಐದು ಪಂದ್ಯಗಳ ಟಿ-20 ಸರಣಿಯನ್ನು ಭಾರತ ಯುವ ತಂಡ ಯಶಸ್ವಿಯಾಗಿ ಮುಗಿಸಿತು. 4-1 ಅಂತರದಲ್ಲಿ ಸರಣಿಯನ್ನು ಜಯಿಸಿ, ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಬಳಿಕದ ಮೊದಲ ಸಿಹಿ ಅನುಭವಿಸಿತು.
ಈ ತಿಂಗಳ ಕೊನೆಯಲ್ಲಿ ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮೊದಲು ಜಿಂಬಾಬ್ವೆ ಸರಣಿ ಗೆಲುವು ಆತ್ಮವಿಶ್ವಾಸ ವೃದ್ಧಿಸಿತು. ಲಂಕಾ ಪ್ರವಾಸಕ್ಕೆ ಯುವ ಪಡೆಯ ಜೊತೆಗೆ ಹಿರಿಯ ಆಟಗಾರರೂ ಸೇರಿಕೊಳ್ಳಲಿದ್ದಾರೆ.
A 42-run victory in the 5th & Final T20I 🙌
— BCCI (@BCCI) July 14, 2024
With that win, #TeamIndia complete a 4⃣-1⃣ series win in Zimbabwe 👏👏
Scorecard ▶️ https://t.co/TZH0TNJcBQ#ZIMvIND pic.twitter.com/oJpasyhcTJ
ಟಿ-20 ವಿಶ್ವಕಪ್ ತಂಡದಲ್ಲಿದ್ದ ಸಂಜು ಸ್ಯಾಮ್ಸನ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಹೊರತುಪಡಿಸಿ ಎಲ್ಲ ಪ್ರಮುಖ ಆಟಗಾರರಿಗೆ ಸರಣಿಗೆ ವಿಶ್ರಾಂತಿ ನೀಡಿ, ಶುಭ್ಮನ್ ಗಿಲ್ ನೇತೃತ್ವದಲ್ಲಿ ಯುವ ತಂಡವನ್ನು ಜಿಂಬಾಬ್ವೆಗೆ ಕಳುಹಿಸಿತ್ತು. ಇದರ ನೇತೃತ್ವವನ್ನು ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ವಹಿಸಿದ್ದರು. ಯುವ ಪಡೆಯಲ್ಲಿ ಖಲೀಲ್ ಅಹ್ಮದ್, ಧ್ರುವ್ ಜುರೆಲ್, ತುಷಾರ್ ದೇಶಪಾಂಡೆ, ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದರು.
ಕ್ರಿಕೆಟ್ ಶಿಶು ಜಿಂಬಾಬ್ವೆ ವಿರುದ್ಧ ಭಾರತದ ಯುವ ಪ್ರತಿಭೆಗಳು ತಮ್ಮ ತಾಕತ್ತು ತೋರಿಸಿ ಐದು ಪಂದ್ಯಗಳ ಸರಣಿಯನ್ನು 4-1 ರಲ್ಲಿ ಜಯಿಸಿದರು. ಮೊದಲ ಪಂದ್ಯದಲ್ಲಿ ಎದುರಾದ ಸೋಲಿನ ಬಳಿಕ ತಮ್ಮನ್ನು ತಿದ್ದಿಕೊಂಡ ತಂಡ ಉಳಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಭಾರತ ತಂಡದ ಸಾರಥ್ಯ ವಹಿಸಿದ್ದ ಗಿಲ್ ಕೂಡ ನಾಯಕತ್ವದ ಮೊದಲ ಯತ್ನದಲ್ಲೇ ಯಶ ಕಂಡರು.
5⃣ matches
— BCCI (@BCCI) July 14, 2024
8⃣ wickets 🙌
For his brilliance with the ball, Washington Sundar becomes the Player of the series 👏👏
Scorecard ▶️ https://t.co/TZH0TNJcBQ#TeamIndia | #ZIMvIND | @Sundarwashi5 pic.twitter.com/pVBJ29nreN
ಐದನೇ ಪಂದ್ಯದ ಫಲಿತಾಂಶ: ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ನಾಲ್ಕನೇ ಪಂದ್ಯದಲ್ಲಿ ಅಬ್ಬರಿಸಿದ್ದ ನಾಯಕ ಗಿಲ್ (12) ಮತ್ತು ಜೈಸ್ವಾಲ್ (13) ಇಲ್ಲಿ ವಿಫಲವಾದರು. ಅಭಿಷೇಕ್ ಶರ್ಮಾ (14) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ತಂಡ ರನ್ ಬರ ಎದುರಿಸುತ್ತಿದ್ದಾಗ ಮೈದಾನಕ್ಕಿಳಿದ ಸಂಜು ಸ್ಯಾಮ್ಸನ್, ಜಿಂಬಾಬ್ವೆ ಬೌಲರ್ಗಳನ್ನು ಬೆಂಡೆತ್ತಿ 45 ಎಸೆತಗಳಲ್ಲಿ 58 ರನ್ ಬಾರಿಸಿದರು. ಇದರ ಜೊತೆಗೆ ರಿಯಾನ್ ಪರಾಗ್ 22, ಶಿವಂ ದುಬೆ 26, ರಿಂಕು ಸಿಂಗ್ 11 ರನ್ ಗಳಿಸಿದರು. ಇದರಿಂದ ತಂಡ ನಿಗದಿತ ಓವರ್ಗಳಲ್ಲಿ 6 ವಿಕೆಟ್ಗೆ 167 ರನ್ ದಾಖಲಿಸಿತು.
ಗುರಿ ಬೆನ್ನತ್ತಿದ ಜಿಂಬಾಬ್ವೆಗೆ ಮುಖೇಶ್ ಕುಮಾರ್ ಶಾಕ್ ನೀಡಿದರು. ಮೊದಲ ಓವರ್ನ ಮೂರನೇ ಎಸೆತದಲ್ಲೇ ಮಡೆವೆರೆ ವಿಕೆಟ್ ಕಿತ್ತರು. ಬಳಿಕ ಯಾರೊಬ್ಬರೂ ದೊಡ್ಡ ಮೊತ್ತ ದಾಖಲಿಸುವಲ್ಲಿ ವಿಫಲವಾದರು. ಡಿಯಾನ್ ಮೇಯರ್ಸ್ 34, ಮರುಮನಿ 27, ಫರಜ್ ಅಕ್ರಮ್ 27 ರನ್ ಪೇರಿಸಿದರು. ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ 18.3 ಓವರ್ಗಳಲ್ಲಿ 125 ರನ್ ಗಳಿಸಿ ಸರ್ವಪತನ ಕಂಡಿತು. ಭಾರತದ ಪರವಾಗಿ ಮುಖೇಶ್ ಕುಮಾರ್ 4 ವಿಕೆಟ್ ಪಡೆದು ಪ್ರಭಾವಿಯಾದರು.