ವಿಶಾಖಪಟ್ಟಣಂ(ಅಂಧ್ರ ಪ್ರದೇಶ): ಇಲ್ಲಿನ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿದರು. ಯುವ ಆಟಗಾರನ ಬ್ಯಾಟಿಂಗ್ ವೈಖರಿಯನ್ನು ಕ್ರಿಕೆಟ್ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಇದು ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮೊದಲ ಟೆಸ್ಟ್ ಶತಕ ದಾಖಲಿಸಿದ್ದರು.
ಜೇಮ್ಸ್ ಆ್ಯಂಡರ್ಸನ್ ಸೇರಿದಂತೆ ಆಂಗ್ಲರ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಜೈಸ್ವಾಲ್ ತಮ್ಮ ಕ್ರಿಕೆಟ್ ಕೌಶಲ್ಯ ಪ್ರದರ್ಶಿಸಿದರು. ತಾಳ್ಮೆಯುತವಾಗಿ ಬ್ಯಾಟ್ ಬೀಸಿದ ಅವರು 152 ಎಸೆತಗಳಲ್ಲಿ 100 ರನ್ ಪೊರೈಸಿದರು. ಯಶಸ್ವಿ ಆಟದಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿದೆ.
ಇದೀಗ 117 ರನ್ ಗಳಿಸುವುದರೊಂದಿಗೆ ಆಟ ಮುಂದುವರೆಸಿದ್ದಾರೆ. ಇವರೊಂದಿಗೆ ಇಂದು ಟೆಸ್ಟ್ ಕ್ರಿಕೆಟ್ನಲ್ಲಿ ಪರ್ದಾಪಣೆ ಪಂದ್ಯವಾಡುತ್ತಿರುವ ರಜತ್ ಪಟಿದಾರ್ ಕೂಡಾ ಶತಕ ಗಳಿಸುವ ನಿರೀಕ್ಷೆ ಮೂಡಿಸಿದ್ದಾರೆ.
ತಂಡಗಳು ಹೀಗಿವೆ-ಭಾರತ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ (ವಿ.ಕೀ), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮುಕೇಶ್ ಕುಮಾರ್, ಕುಲದೀಪ್ ಯಾದವ್
ಇಂಗ್ಲೆಂಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಓಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿ.ಕೀ), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲೆ, ಶೋಯೆಬ್ ಬಶೀರ್, ಜೇಮ್ಸ್ ಆ್ಯಂಡರ್ಸನ್
ಇದನ್ನೂ ಓದಿ: 2ನೇ ಟೆಸ್ಟ್: ಟಾಸ್ ಸೋತು ಇಂಗ್ಲೆಂಡ್ ಬೌಲಿಂಗ್; ಭಾರತ ಪರ ಪಾಟಿದಾರ್ ಪಾದಾರ್ಪಣೆ