ಹೈದರಾಬಾದ್: ಟೀಂ ಇಂಡಿಯಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೈಟ್‌ವಾಶ್ ಆದ ಬೆನ್ನಲ್ಲೇ ಡಬ್ಲ್ಯೂಟಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ನಿಗದಿಯಂತೆ ಇನ್ನೂ ಏಳು ಟೆಸ್ಟ್ ಪಂದ್ಯಗಳನ್ನು ಆಡಬೇಕಿರುವ ಆಸ್ಟ್ರೇಲಿಯಾ ಶೇ.62.50 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿದೆ. ಸದ್ಯ 58.33 ಅಂಕಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ 55.56 ಅಂಕಗಳೊಂದಿಗೆ ಮೂರನೇ ಸ್ಥಾನ ಮತ್ತು ಭಾರತ ವಿರುದ್ಧ ಟೆಸ್ಟ್ ಸರಣಿಯ ಗೆಲುವಿನೊಂದಿಗೆ ಕಿವೀಸ್ 54.55 ಅಂಕಗಳೊಂದಿಗೆ ನಾಲ್ಕನೇ ಸ್ಥಾನ, ಆ ನಂತರ ದಕ್ಷಿಣ ಆಫ್ರಿಕಾ 54.17 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು: ಟೀಂ ಇಂಡಿಯಾ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನಾಡಲಿದೆ. ಇದು ಭಾರತಕ್ಕೆ ಕೊನೆಯ ಸರಣಿಯಾಗಿದೆ. ಈ ಸರಣಿಯಲ್ಲಿ ಭಾರತ ತಂಡವು 4 ಟೆಸ್ಟ್ ಗೆದ್ದು, ಒಂದನ್ನು ಡ್ರಾ ಮಾಡಿಕೊಂಡರೂ ಅಥವಾ ಒಂದು ಪಂದ್ಯವನ್ನು ಸೋತರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಲು ಕಷ್ಟವಾಗಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
92 ವರ್ಷಗಳ ಬಳಿಕ ತವರಿನಲ್ಲಿ ಟೀಂ ಇಂಡಿಯಾ ವೈಟ್‌ವಾಶ್: ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಭಾನುವಾರ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 25 ರನ್ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕಿವೀಸ್ ಕ್ಲೀನ್ ಸ್ವೀಪ್ ಮಾಡಿತು. ಇನ್ನೊಂದೆಡೆ, ಭಾರತ 92 ವರ್ಷಗಳ ನಂತರ ತವರಿನಲ್ಲಿ ನಡೆದ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳನ್ನು ಸೋತು ವೈಟ್‌ವಾಶ್ ಆಯಿತು.
2000ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಆಗಿತ್ತು. ಆದರೆ 3 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳಲ್ಲಿ ಒಮ್ಮೆಯೂ ಕ್ಲೀನ್ ಸ್ವೀಪ್ ಆಗಿರಲಿಲ್ಲ.
ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 235 ರನ್‌ಗಳಿಗೆ ಸರ್ವಪತನ ಕಂಡಿದ್ದ ಕಿವೀಸ್ ಪಡೆ ಎರಡನೇ ಇನ್ನಿಂಗ್ಸ್ನಲ್ಲೂ ಸ್ಪಿನ್ ಬಲೆಗೆ ಸಿಲುಕಿ 174 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತಕ್ಕೆ 147 ರನ್ಗಳ ಸಾಮಾನ್ಯ ಗುರಿ ನೀಡಿತ್ತು. ಇದನ್ನು ಬೆನ್ನತ್ತಿದ ಭಾರತ, ಅಜಾಜ್ ಪಟೇಲ್ ಸ್ಪಿನ್ ದಾಳಿಗೆ ಸಿಲುಕಿ ಕೇವಲ 121 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ರಿಷಭ್ ಪಂತ್ ಅರ್ಧಶತಕ ಸಿಡಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳು ಕ್ರೀಸ್ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಐಪಿಎಲ್ಗೆ ಗುಡ್ಬೈ ಹೇಳಲಿರುವ ಸ್ಟಾರ್ ಆಲ್ರೌಂಡರ್: ಮೆಗಾ ಹರಾಜಿನಿಂದಲೂ ಹಿಂದೆ ಸರಿದ ಆಟಗಾರ