ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ 2024ರ ಶನಿವಾರದ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡಗಳು ಮುಖಾಮುಖಿಯಾಗಿದ್ದವು. ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡವು ವಾರಿಯರ್ಸ್ ಅನ್ನು 2 ರನ್‌ಗಳಿಂದ ಮಣಿಸಿತು.
ಇನ್ನೇನು ಯುಪಿ ಗೆಲುವು ಬಹುತೇಕ ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಗ್ರೇಸ್ ಹ್ಯಾರಿಸ್ ಹಾಗೂ ಶ್ವೇತಾ ಸೆಹ್ರಾವತ್ ಸುಲಭವಾಗಿ ರನ್ ಚೇಸ್ ಮಾಡುತ್ತಿದ್ದರು. ಆದರೆ, ಕೊನೆಯ ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳು ಅದ್ಭುತ ಕಂಬ್ಯಾಕ್ ಮಾಡಿದರು. ಯುಪಿ ಗೆಲುವಿಗೆ 158 ರನ್‌ಗಳ ಗುರಿ ಇತ್ತು. ಆದರೆ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 155 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಂದ್ಯ ಹೀಗಿತ್ತು..: ಆರ್‌ಸಿಬಿ ನೀಡಿದ ಟಾರ್ಗೆಟ್‌ಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಯುಪಿಗೆ ಉತ್ತಮ ಆರಂಭ ಸಿಗಲಿಲ್ಲ. 10 ರನ್‌ಗಳಾಗುತ್ತಿದ್ದಂತೆ ತಂಡ ಮೊದಲ ವಿಕೆಟ್ ಕಳೆದುಕೊಂಡಿತು. ಅಲಿಸ್ಸಾ ಹೀಲಿ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ವೃಂದಾ ದಿನೇಶ್ ಮತ್ತು ತಹಿಲಾ ಮೆಕ್‌ಗ್ರಾತ್ ನಡುವೆ ಉತ್ತಮ ಜೊತೆಯಾಟ ನಡೆಯಿತು. ಆದರೆ ವೃಂದಾ 48 ರನ್ ಗಳಿಸಿ ಔಟಾದರು. ಯುಪಿ 49 ರನ್ ಗಳಿಸುತ್ತಿದ್ದಂತೆ ಮೂರನೇ ವಿಕೆಟ್ ಉರುಳಿತು. ತಹಿಲಾ ಮೆಕ್‌ಗ್ರಾತ್ 22 ರನ್ ಗಳಿಸಿ ಶೋಭನಾ ಆಶಾಗೆ ವಿಕೆಟ್ ಒಪ್ಪಿಸಿದರು.
-
Two days already into #TATAWPL 2024 and we have witnessed back to back final-ball thrillers! 🔥
— Women's Premier League (WPL) (@wplt20) February 24, 2024
The packed house in Bengaluru celebrates @RCBTweets' inaugural win of the season 🥳
Match Centre 💻📱 https://t.co/kIBDr0FhM4#TATAWPL | #RCBvUPW pic.twitter.com/AAEtmoAadW
ಇದಾದ ನಂತರ ಗ್ರೇಸ್ ಹ್ಯಾರಿಸ್ ಮತ್ತು ಶ್ವೇತಾ ಸೆಹ್ರಾವತ್ ನಡುವೆ ಉತ್ತಮ ಜೊತೆಯಾಟ ಏರ್ಪಟ್ಟಿತು. ಗ್ರೇಸ್ ಹ್ಯಾರಿಸ್ 23 ಎಸೆತಗಳಲ್ಲಿ 38 ರನ್ ಗಳಿಸಿದರು. ಶ್ವೇತಾ ಸೆಹ್ರಾವತ್ 25 ಎಸೆತಗಳಲ್ಲಿ 31 ರನ್ ಕೊಡುಗೆ ನೀಡಿದರೆ, ತಂಡಕ್ಕೆ ಉಳಿದ ಬ್ಯಾಟರ್‌ಗಳ ಬೆಂಬಲ ಸಿಗಲಿಲ್ಲ. ಹೀಗಾಗಿ ಯುಪಿ ವಾರಿಯರ್ಸ್ ಸೋಲು ಕಂಡಿತು.
ಶೋಭನಾ ಆಶಾ ಆರ್‌ಸಿಬಿಯ ಯಶಸ್ವಿ ಬೌಲರ್ ಎನಿಸಿದರು. ಅವರು 22 ರನ್ ನೀಡಿ 5 ವಿಕೆಟ್ ಕಬಳಿಸಿದರು. ಸೋಫಿ ಮೊಲಿನೆಕ್ಸ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ ಒಂದೊಂದು ವಿಕೆಟ್ ಪಡೆದರು.
ರಿಚಾ ಘೋಷ್, ಮೇಘನಾ ಬಿರುಸಿನ ಇನಿಂಗ್ಸ್: ಇದಕ್ಕೂ ಮೊದಲು ಟಾಸ್ ಗೆದ್ದ ಯುಪಿ ವಾರಿಯರ್ಸ್ ನಾಯಕಿ ಅಲಿಸಾ ಹೀಲಿ ಬೌಲಿಂಗ್ ನಿರ್ಧಾರ ಮಾಡಿದರು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ತಂಡದ ಪರ ಎಸ್.ಮೇಘನಾ 44 ಎಸೆತಗಳಲ್ಲಿ 53 ರನ್ ಗಳಿಸಿದರು. ಇವರ ಇನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸೇರಿತ್ತು.
ರಿಚಾ ಘೋಷ್ 37 ಎಸೆತಗಳಲ್ಲಿ 62 ರನ್ ಗಳಿಸಿ ಬಿರುಸಿನ ಇನಿಂಗ್ಸ್ ಆಡಿದರು. 12 ಬೌಂಡರಿ ಪೇರಿಸಿದರು. ವಾರಿಯರ್ಸ್ ಪರ ರಾಜೇಶ್ವರಿ ಗಾಯಕ್ವಾಡ್ ಗರಿಷ್ಠ 2 ವಿಕೆಟ್ ಪಡೆದರು. ಇದಲ್ಲದೇ ಗ್ರೇಸ್ ಹ್ಯಾರಿಸ್, ತಹಿಲಾ ಮೆಗ್ರಾತ್, ಎಸ್ಕಲಾಂಟನ್ ಮತ್ತು ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಉರುಳಿಸಿದರು.
ಇದನ್ನೂ ಓದಿ: ಸವಾಯಿ ಮಾನ್ ಸಿಂಗ್ ಸ್ಟೇಡಿಯಂ, ಆರ್ಸಿಎ ಕಚೇರಿ, ಹೋಟೆಲ್ಗಳನ್ನು ಸ್ವಾಧೀನಪಡಿಸಿಕೊಂಡ ರಾಜಸ್ಥಾನ ಸ್ಪೋರ್ಟ್ಸ್ ಕೌನ್ಸಿಲ್