ಹೈದರಾಬಾದ್: ಪುರುಷರ ಟಿ20 ಕ್ರಿಕೆಟ್ ಬಳಿಕ ಮಹಿಳೆಯರ ಕ್ರಿಕೆಟ್ ಹಂಗಾಮ ಶುರುವಾಗಲಿದೆ. 2024ರ ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ಭಾನುವಾರ ಬಿಡುಗಡೆ ಮಾಡಿದೆ.
ಈ ಬಾರಿಯ ಚುಟುಕು ಮಾದರಿಯ ಟೂರ್ನಿಯ ಆತಿಥ್ಯವನ್ನು ಬಾಂಗ್ಲಾದೇಶ ವಹಿಸಿಕೊಂಡಿದೆ. ಅಕ್ಟೋಬರ್ 6 ರಂದು ಪಂದ್ಯಾವಳಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಒಟ್ಟು 10 ತಂಡಗಳು ಭಾಗವಹಿಸಲಿವೆ. 8 ತಂಡಗಳು ನೇರ ಅರ್ಹತೆ ಪಡೆದಿದ್ದರೆ, ಇನ್ನೆರಡು ತಂಡಗಳು ಅರ್ಹತಾ ಪಂದ್ಯಗಳ ಮೂಲಕ ಅಂತಿಮ ಪಟ್ಟಿಗೆ ಸೇರಲಿವೆ. ಈಗಾಗಲೇ ಅರ್ಹತಾ ಪಂದ್ಯಗಳು ದುಬೈನಲ್ಲಿ ನಡೆಯುತ್ತಿವೆ.
ತಂಡಗಳ ವಿಭಜನೆ ಹೀಗಿದೆ: 10 ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ ಮಹಿಳಾ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜೊತೆಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅರ್ಹತೆ ಪಡೆಯುವ ತಂಡ ಇರಲಿದೆ. ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಅರ್ಹತಾ ತಂಡ ಸ್ಥಾನ ಪಡೆದಿವೆ.
ಅಕ್ಟೋಬರ್ 3 ರಂದು ಢಾಕಾ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:00 ಗಂಟೆಗೆ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಬಳಿಕ ಆತಿಥೇಯ ಬಾಂಗ್ಲಾದೇಶ ಅದೇ ದಿನ ಸಂಜೆ 7 ಗಂಟೆಗೆ ಢಾಕಾದಲ್ಲೇ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ರನ್ನರ್ ಅಪ್ ತಂಡವನ್ನು ಎದುರಿಸಲಿದೆ.
ಭಾರತ ಮಹಿಳೆಯರ ವಿಶ್ವಕಪ್ ಅಭಿಯಾನ: ಭಾರತ ಮಹಿಳಾ ತಂಡ ಅಕ್ಟೋಬರ್ 4 ರಂದು ನ್ಯೂಜಿಲ್ಯಾಂಡ್ ಮಹಿಳೆಯರನ್ನು ಎದುರಿಸುವ ಮೂಲಕ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಬಳಿಕ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಅಕ್ಟೋಬರ್ 6 ರಂದು ಸಿಲ್ಹೆಟ್ ಮೈದಾನದಲ್ಲಿ ಎದುರಿಸಲಿದೆ.
ಟೂರ್ನಿಯಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ ಎರಡೂ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್ ತಲುಪಲಿವೆ. ಅಕ್ಟೋಬರ್ 17 ರಂದು ಸಿಲ್ಹೆಟ್ ಮೈದಾನದಲ್ಲಿ ಮೊದಲ ಸೆಮಿಫೈನಲ್, ಅಕ್ಟೋಬರ್ 18 ರಂದು ಢಾಕಾದಲ್ಲಿ 2ನೇ ಸೆಮೀಸ್ ನಡೆಯಲಿದೆ. ಅಕ್ಟೋಬರ್ 20 ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ. ಸೆಮಿಫೈನಲ್ ಮತ್ತು ಫೈನಲ್ಗಳಿಗೆ ಮೀಸಲು ದಿನ ನಿಗದಿ ಮಾಡಲಾಗಿದೆ. ಟೂರ್ನಿಯ ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1 ರವರೆಗೆ ಬಿಕೆಎಸ್ಪಿ ಮೈದಾನದಲ್ಲಿ ನಡೆಯಲಿವೆ.
ಭಾರತ ಮಹಿಳೆಯರ ಪಂದ್ಯಗಳು
ದಿನಾಂಕ | ಎದುರಾಳಿ ತಂಡ |
ಅಕ್ಟೋಬರ್ 4 | ನ್ಯೂಜಿಲ್ಯಾಂಡ್ |
ಅಕ್ಟೋಬರ್ 6 | ಪಾಕಿಸ್ತಾನ |
ಅಕ್ಟೋಬರ್ 9 | ಅರ್ಹತಾ ತಂಡ-1 |
ಅಕ್ಟೋಬರ್ 13 | ಆಸ್ಟ್ರೇಲಿಯಾ |
ಇದನ್ನೂ ಓದಿ: ಟಿ20 ವಿಶ್ವಕಪ್ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ IPL ತಂಡಗಳ ಪ್ರಾತಿನಿಧ್ಯವೆಷ್ಟು? - T20 World Cup 2024