ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2025 ಆರಂಭಕ್ಕೂ ಮೊದಲೇ ಭಾರಿ ಕುತೂಹಲ ಕೆರಳಿಸಿದೆ. ಈ ಬಾರಿ ಮೆಗಾ ಹರಾಜು ನಡೆಯುತ್ತಿರುವ ಕಾರಣ ಎಲ್ಲಾ ತಂಡಗಳಲ್ಲಿ ಹೊಸ ಆಟಗಾರರನ್ನು ಕಾಣಬಹುದು. ಇದಕ್ಕಾಗಿ ಆಟಗಾರರು ಈಗಿನಿಂದಲೇ ಭರ್ಜರಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಭಾರತದ ತಂಡದ ವಿಕೆಟ್ ಕೀಪರ್‌ವೊಬ್ಬರು ಎಲ್ಲಾ ಸ್ವರೂಪದ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಹೌದು, ಟೀಂ ಇಂಡಿಯಾದ ಹಿರಿಯ ಆಟಗಾರ ವೃದ್ಧಿಮಾನ್ ಸಾಹಾ 2025ರ ಐಪಿಎಲ್ ಆರಂಭಕ್ಕೂ ಮುನ್ನವೇ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಸದ್ಯ ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ಇವರು, "ಇದು ನನ್ನ ವೃತ್ತಿಜೀವನದ ಕೊನೆಯ ಕ್ರಿಕೆಟ್ ಸರಣಿಯಾಗಿದ್ದು ಇನ್ಮುಂದೆ ಐಪಿಎಲ್ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
"ಸುದೀರ್ಘ ಕ್ರಿಕೆಟ್ ಪಯಣದಲ್ಲಿ ಇದು ನನ್ನ ಕೊನೆಯ ರಣಜಿ ಟ್ರೋಫಿ. ಸದ್ಯ ಬಂಗಾಳ ತಂಡವನ್ನು ಪ್ರತಿನಿಧಿಸುತ್ತಿರುವ ನನಗೆ ಹೆಮ್ಮೆ ಇದೆ. ಈ ಸೀಸನ್ ನನ್ನ ಪಾಲಿಗೆ ಸ್ಮರಣೀಯವಾಗಿರಲಿದೆ" ಎಂದು ಇನ್ಸ್ಟಾದಲ್ಲಿ ಭಾನುವಾರ ರಾತ್ರಿ ಮಾಹಿತಿ ಹಂಚಿಕೊಂಡಿದ್ದಾರೆ.
ವೃದ್ಧಿಮಾನ್ ಸಾಹಾ 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಪ್ರಾರಂಭಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮೂಲಕ ಪಾದಾರ್ಪಣೆ ಮಾಡಿದ್ದರು. ಒಟ್ಟು 40 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 56 ಇನ್ನಿಂಗ್ಸ್‌ನಲ್ಲಿ 29ರ ಸರಾಸರಿಯಲ್ಲಿ 1,353 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 6 ಅರ್ಧಶತಕಗಳಿವೆ.
WRIDDHIMAN SAHA IS SET TO RETIRE FROM ALL FORMS OF CRICKET AT THE END OF RANJI SEASON 🇮🇳
— Johns. (@CricCrazyJohns) November 4, 2024
- Thank you for the memories, Saha. pic.twitter.com/2yxD6O4PVh
ವಿಕೆಟ್ ಕೀಪರ್ ಕೂಡ ಆಗಿದ್ದ ಸಾಹಾ, ಟೆಸ್ಟ್‌ಗಳಲ್ಲಿ 92 ಕ್ಯಾಚ್ ಪಡೆದಿದ್ದು ಮತ್ತು 12 ಸ್ಟಂಪ್ ಔಟ್ ಮಾಡಿದ್ದಾರೆ. ಒಟ್ಟು 9 ಏಕದಿನ ಪಂದ್ಯಗಳನ್ನು ಆಡಿರುವ ಇವರು, 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು.
ಐಪಿಎಲ್‌ನಲ್ಲಿ ಸುದೀರ್ಘವಾಗಿ ಆಡಿರುವ ಸಾಹಾ, 2,934 ರನ್ ಗಳಿಸಿದ್ದಾರೆ. 2024ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿದ್ದರು.